Bengaluru students: ಪಾಕ್ ಪರ ಘೋಷಣೆ ಕೂಗಿದ ಬೆಂಗಳೂರಿನ ಕಾಲೇಜ್ ವಿದ್ಯಾರ್ಥಿಗಳು
ಬೆಂಗಳೂರಿನ ನ್ಯೂ ಹಾರಿಜನ್ ಕಾಲೇಜ್ ನಲ್ಲಿ ಪಾಕ್ ಪರ (Pak) ಘೋಷಣೆ ಕೂಗಿರುವ ಘಟನೆ ನಡೆದಿದೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿ ಉದ್ಧಟತನ ಮೆರೆದಿರುವ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾಲೇಜು ಕಾರ್ಯಕ್ರಮವೊಂದರಲ್ಲಿ ಆರ್ಯನ್, ದಿನಕರ್ ಮತ್ತು ರಿಯಾ ರವಿಚಂದ್ರನ್ ಎಂಬ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಬೆಂಗಳೂರಿನ ಮಾರತ್ತಹಳ್ಳಿಯಲ್ಲಿರುವ ನ್ಯೂ ಹಾರಿಜನ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಈ ಘಟನೆ ನಡೆದಿದೆ. ಪಾಕ್ ಪರ ಘೋಷಣೆ ಕೂಗುತ್ತಿದ್ದಂತೆ ಅಲ್ಲಿ ವಿದ್ಯಾರ್ಥಿಗಳ ದೊಡ್ಡ ಗುಂಪು ಜಮಾಯಿಸಿದೆ. ಪಾಕ್ ಪರ ಘೋಷಣೆ ಕೂಗಿದ ಮೂವರನ್ನು ಇತರ ವಿದ್ಯಾರ್ಥಿಗಳು ಥಳಿಸಲು ಮುಂದಾಗಿದ್ದು, ಕೂಡಲೇ ಅವರು ಕ್ಷಮೆಯಾಚಿಸಿದ್ದಾರೆ.
ಪೊಲೀಸರು ಆ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಮಾಷೆಗಾಗಿ ಹೀಗೆ ಮಾಡಿದ್ದೇವೆ ಎಂದು ತಪ್ಪೊಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.
ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.








