ಮತ್ತೊಮ್ಮೆ ರಾಷ್ಟ್ರ ರಾಜಧಾನಿ ಸಂಪೂರ್ಣ ಸ್ತಬ್ಧ ??
ಹೊಸದಿಲ್ಲಿ, ಜೂನ್ 11: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮಿತಿ ಮೀರಿದ್ದು, ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಭಾರೀ ಏರಿಕೆಯಾಗಿದೆ.
ರಾಜ್ಯದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರದೇ ಇರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್‌ಡೌನ್ ಹೇರುವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ.
ಈಗಾಗಲೇ ಡಿಸಿಎಂ ಮನಿಷ್ ಸಿಸೊಡಿಯಾ ದೆಹಲಿಯಲ್ಲಿ ಜುಲೈ ಅಂತ್ಯದೊಳಗೆ 5.5 ಲಕ್ಷ ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರೆ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಕೊರೊನಾ ಸೋಂಕು ಸಮುದಾಯಕ್ಕೆ ಹಬ್ಬಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ.
24 ಗಂಟೆಗಳ ಅವಧಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದು, ಇದು ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಲಾಕ್ ಡೌನ್ ಸಡಿಲಿಕೆಯ ನಂತರ ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಮತ್ತೆ ಲಾಕ್‌ಡೌನ್ ಹೇರುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಎಷ್ಟೇ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು
ಕೈಗೊಂಡರೂ ಕೊರೋನಾ ಸೋಂಕು ನಿಯಂತ್ರಣಕ್ಕೆ ಸಿಗದೇ ದಿನೇ ದಿನೇ ಹೆಚ್ಚುತ್ತಿರುವ ಕಾರಣ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಹೇರುವುದು ಮಾತ್ರ ದೆಹಲಿ ಸರ್ಕಾರದ ಮುಂದಿರುವ ಒಂದೇ ಒಂದು ಮಾರ್ಗವಾಗಿದೆ. ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿ ಮತ್ತೊಮ್ಮೆ ಸಂಪೂರ್ಣವಾಗಿ ಸ್ತಬ್ಧಗೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.








