ತಿರುವನಂತಪುರ: ದಕ್ಷಿಣ ಭಾರತದ ಕೋಟ್ಯಾಂತರ ಭಕ್ತರ ಆರಾಧ್ಯದೈವ ಶಬರಿಮಲೆ ಅಯ್ಯಪ್ಪನ ದರ್ಶನ ಭಾಗ್ಯ ಸದ್ಯಕ್ಕೆ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಕೇಂದ್ರ ಸರ್ಕಾರದ ಲಾಕ್‍ಡೌನ್ ಸಡಿಲಿಕೆ ಮಾರ್ಗಸೂಚಿಯ ಪ್ರಕಾರ ಕಳೆದ ಸೋಮವಾರದಿಂದಲೇ ದೇಶಾದ್ಯಂತ ಇರುವ ದೇವಸ್ಥಾನ, ಚರ್ಚ್, ಮಸೀದಿಗಳನ್ನು ತೆರೆಯಲಾಗಿದೆ. ಇಂದಿನಿಂದ ತಿರುಪತಿ ತಿಮ್ಮಪ್ಪ ಕೂಡ ಭಕ್ತರಿಗೆ ದರ್ಶನ ಕೊಡಲಾರಂಭಿಸಿದ್ದು, ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿ ದೇವಸ್ಥಾನ ಕೂಡ ಕಳೆದ ಸೋಮವಾರದಿಂದಲೇ ಭಕ್ತರಿಗೆ ತೆರೆದುಕೊಂಡಿದೆ.
ಆದರೆ, ಜೂನ್ 30ವರೆಗೆ ಶಬರಿಮಲೆಯಲ್ಲಿ ಭಕ್ತರಿಗೆ ಅಯ್ಯಪ್ಪ ಸ್ವಾಮಿ ದರ್ಶನ ಸಿಗುವುದು ಅನುಮಾನ ಎನ್ನಲಾಗಿದೆ. ಜೂನ್ 14ರಿಂದ ಮಾಸಿಕ ಪೂಜೆಗೆ ಅಯ್ಯಪ್ಪನ ದೇಗುಲದ ಬಾಗಿಲು ತೆಗೆಯಬೇಕು. ಆದರೆ, ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಜೂನ್ 14 ಮಾತ್ರವಲ್ಲ, ಈ ತಿಂಗಳ ಅಂತ್ಯದವರೆಗೂ ದೇವಸ್ಥಾನ ಭಕ್ತರಿಗೆ ಓಪನ್ ಆಗುವುದು ಅನುಮಾನ ಎನ್ನಲಾಗಿದೆ. ಇಂದು ಕೇರಳದ ಮುಜರಾಯಿ ಸಚಿವ ಸುರೇಂದ್ರನ್ ಅವರು ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕರ ಜತೆ ಸಭೆ ನಡೆಸಿದರು. ಸಭೆಯಲ್ಲಿ ಸದ್ಯಕ್ಕೆ ಅಯ್ಯಪ್ಪನ ದೇಗುಲ ತೆರೆಯುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನ ತೆರೆಯುವುದಿಲ್ಲ ಎಂದು ಸಚಿವ ಸುರೇಂದ್ರನ್ ಸ್ಪಷ್ಟಪಡಿಸಿದ್ದಾರೆ.
ಅಯ್ಯಪ್ಪನ ವಾರ್ಷಿಕ ಉತ್ಸವ ರದ್ದು
ಶಬರಿಗಿರಿ ಶಿಖರಗಳ ಮೇಲೆ ನೆಲೆಸಿರುವ ಅಯ್ಯಪ್ಪನ ಸನ್ನಿಧಿಯಲ್ಲಿ ಪ್ರತಿವರ್ಷ ಜೂನ್ 19ರಿಂದ ವಾರ್ಷಿಕ ಉತ್ಸವಗಳು ಆರಂಭವಾಗುತ್ತವೆ. ಆದರೆ, ಈ ವರ್ಷ ಕೊರೊನಾ ಭೀತಿ ಹಿನ್ನೆಲೆಯಲ್ಲಿ ವಾರ್ಷಿಕ ಉತ್ಸವಗಳನ್ನು ರದ್ದು ಮಾಡಲಾಗಿದೆ.
ಒಂದು ವೇಳೆ ವಾರ್ಷಿಕ ಉತ್ಸವಕ್ಕೆ ಅವಕಾಶ ನೀಡಿದರೆ ಭಕ್ತರ ಓಡಾಟ ಹೆಚ್ಚಲಿದೆ. ಈ ವೇಳೆ ಯಾರೋ ಒಬ್ಬರಲ್ಲಿ ಕೊರೊನಾ ಸೋಂಕು ಇದ್ದರೂ ಸಾವಿರಾರು ಜನರಿಗೆ ಹರಡುವ ಸಾಧ್ಯತೆ ಇದೆ. ಹೀಗಾಗಿ ಈ ವರ್ಷದ ವಾರ್ಷಿಕ ಉತ್ಸವವನ್ನೂ ಸಹ ರದ್ದು ಮಾಡಲಾಗಿದೆ ಎಂದು ಮುಜರಾಯಿ ಸಚಿವ ಸುರೇಂದ್ರನ್ ತಿಳಿಸಿದ್ದಾರೆ.
ಇಂದು ತಿರುವಾಂಕೂರು ದೇವಸ್ಥಾನ ಆಡಳಿತ ಮಂಡಳಿ ಅಧಿಕಾರಿಗಳು, ಶಬರಿಮಲೆ ದೇವಸ್ಥಾನದ ಮುಖ್ಯ ತಂತ್ರಿ ಕಾಂತರಾರು ಮಹೇಶ್ ಮೋಹನಾರು ಜೊತೆಗೆ ಸಚಿವ ಸುರೇಂದ್ರನ್ ಸಭೆ ನಡೆಸಿದರು. ಸಭೆಯಲ್ಲಿ ಸದ್ಯಕ್ಕೆ ಶಬರಿಮಲೆಯಲ್ಲಿ ಯಾವುದೇ ಧಾರ್ಮಿಕ ಆಚರಣೆ ನಡೆಸುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ.








