ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ವರ್ಷಧಾರೆ ಆಗುವ ಸಾಧ್ಯತೆಗಳಿವೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಇಂದು ಯೆಲ್ಲೋ ಅಲರ್ಟ್ ಹಾಗೂ ನಾಳೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇಂದು ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕೆಲವೆಡೆ ಸುಮಾರು 20 ಸೆಂಟಿ ಮೀಟರ್ ಮಳೆ ಬೀಳಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ. ಹಾಗೆಯೇ ಮಲೆನಾಡಿನ ಜಿಲ್ಲೆಯಲ್ಲೂ ಸಾಧಾರಣ ಹಾಗೂ ಕೆಲವೆಡೆ ಭಾರಿ ಮಳೆ, ಉತ್ತರ ಒಳನಾಡಿನ ಕೆಲ ಭಾಗಗಳಲ್ಲಿ ಸಾಧಾರಣ ಮತ್ತು ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇಲ್ಲ ಎಂದಿರುವ ಅವರು, ಇಂದು ಮತ್ತು ನಾಳೆ ಕರಾವಳಿಯಲ್ಲಿ ತೀವ್ರ ಮಳೆ ಸುರಿಯಲಿದೆ. ಮತ್ತು 13, 14 ರವರೆಗೂ ಕರಾವಳಿ ಭಾಗದಲ್ಲಿ ಮಳೆಯಾಗಲಿದೆ. ಎರಡು ದಿನದ ಬಳಿಕ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಕಡಿಮೆಯಾಗಲಿದ್ದು, ಈ ವಾರದಲ್ಲಿ ವಾಡಿಕೆಯಷ್ಟು ಮಳೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಕಳೆದ 24 ಗಂಟೆಯಲ್ಲಿ ಉಡುಪಿಯಲ್ಲಿ 239 ಮಿಲಿ ಮೀಟರ್, ಉತ್ತರ ಕನ್ನಡದ ಅಂಕೋಲಾದಲ್ಲಿ 148, ಶಿವಮೊಗ್ಗ 118, ವಿಜಯಪುರ 98, ರಾಯಚೂರು 96, ದಕ್ಷಿಣ ಕನ್ನಡ 92.5 ಮಿ.ಮೀ ಹಾಗೂ ಕಲಬುರಗಿ, ಕೊಪ್ಪಳ, ಬೀದರ್, ಬಳ್ಳಾರಿ ರಾಮನಗರದಲ್ಲಿಯೂ ಧಾರಾಕಾರ ಮಳೆ ಸುರಿದಿದೆ.








