ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಸಿಕ್ಕಸಿಕ್ಕವರ ದೇಹಹೊಕ್ಕಿ ಆರ್ಭಟಿಸುತ್ತಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನ ಹೊಸ ಏರಿಯಾಗಳಿಗೆ ಹರಡಿ ಆತಂಕ ಹೆಚ್ಚಿಸುತ್ತಿದೆ. ನಗರದ ರಾಜಾಜಿನಗರದ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಗೆ ಕೊರೊನಾ ಸೋಂಕಿರುವುದು ಇಂದು ದೃಢಪಟ್ಟಿದೆ.
ಈ ಸೋಂಕಿತ ಮಹಿಳೆಯು ಶಿವಾಜಿನಗರದ ನಿವಾಸಿಯಾಗಿದ್ದು ಕೊರೊನಾ ಗುಣಲಕ್ಷಣಗಳು ಕಂಡುಬಂದ ಹಿನ್ನೆಲೆ ತಪಾಸಣೆ ಮಾಡಿಸಿಕೊಂಡಿದ್ದರು. ಸದ್ಯ ರಿಪೋರ್ಟ್ ಬಂದಿದ್ದು, ಸೋಂಕು ತಗುಲಿರುವುದು ಖಚಿತವಾಗಿದೆ. ಆದರೆ ಮಹಿಳೆ ಸೋಂಕು ಹೇಗೆ ಬಂತು ಎಂಬ ಮಾಹಿತಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಲಭ್ಯವಾಗಿಲ್ಲ. ಇತ್ತ ಮಹಿಳೆಯ ಪತಿಗೂ ಈಗ ಸೋಂಕಿನ ಲಕ್ಷಣಗಳು ಪತ್ತೆಯಾಗಿವೆ ಎನ್ನಲಾಗಿದೆ. ಸದ್ಯ ಸೋಂಕಿತ ಮಹಿಳೆಯನ್ನು ವಿಕ್ಟೋರಿಯಾ ಆಸ್ಪತ್ರೆ ಶಿಫ್ಟ್ ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಇತ್ತ ಈಕೆಯ ಸಂಪರ್ಕದಲ್ಲಿದ್ದವರನ್ನೂ ಸಹ ಕ್ವಾರಂಟೈನ್ ಮಾಡಲಾಗುತ್ತಿದೆ.
ಇನ್ನು ಮಹಿಳೆ ಕೆಲಸ ಮಾಡುತ್ತಿದ್ದ ಪ್ರಿಂಟಿಂಗ್ ಪ್ರೆಸ್ ನಲ್ಲಿ 30ಕ್ಕೂ ಹೆಚ್ಚು ಜನರು ಕಾರ್ಯ ನಿರ್ವಹಿಸುತ್ತಿದ್ದು, ಅವರೆಲ್ಲರನ್ನೂ ಸಂಪರ್ಕಿಸಿ ಕ್ವಾರಂಟೈನ್ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಜೊತೆಗೆ ಪ್ರಿಂಟಿಂಗ್ ಪ್ರೆಸ್ ಗೆ ಬೀಗ ಹಾಕಿ ಔಷಧಿ ಸಿಂಪಡಣೆ ನಡೆಸಿದೆ.








