Cyclone / ಮಾಂಡೌಸ್ ಬೆನ್ನಲ್ಲೇ ಮತ್ತೊಂದು ಚಂಡಮಾರುತ – ಎರಡು ದಿನ ಭಾರಿ ಚಳಿ – ಮಳೆ
ಮಾಂಡೌಸ್ ಚಂಡಮಾರುತದ ಎಫೆಕ್ಟ್ ಪರಿಣಾಮ ಕರ್ನಾಟಕದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣ ಹಾಗೂ ತಾಪಮಾನ ಏರಿಳಿತದಿಂದ ತೀವ್ರಗೊಂಡಿರುವ ಚಳಿ ಮತ್ತು ಮಳೆಗೆ ರಾಜ್ಯ ಗಡಗಡ ನಡುಗಿದೆ. ಮಾಂಡೌಸ್ ಬೆನ್ನಲ್ಲೇ ಮತ್ತೊಂದು ಚಂಡಮಾರುತ ಪೂರ್ವ ಕರಾವಳಿಗೆ ನಾಳೆ ಅಥವಾ ಬುಧವಾರ ಅಪ್ಪಳಿಸುವ ಸಾಧ್ಯತೆ ಇದೆ. ಹಾಗಾಗಿ ಕರ್ನಾಟಕದಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕೋಲಾರ, ಕೊಪ್ಪಳ, ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲೂ ಮಳೆ ಅಬ್ಬರ ಜೋರಾಗಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಶಾಲೆಗಳಿಗೆ ಇಂದು ರಜೆ ಸಾರಲಾಗಿದೆ.
ಸೈಕ್ಲೋನ್ ಪರಿಣಾಮದಿಂದ ಮೋಡದಲ್ಲಿ ತೇವಾಂಶ ಇರುವುದರಿಂದ ಚಳಿ ತೀವ್ರಗೊಂಡಿದ್ದು, ಆಸ್ತಮಾ, ಟಿಬಿ, ನ್ಯುಮೋನಿಯಾ ಇರುವವರು ಎಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಶೀತ, ನೆಗಡಿ, ಕೆಮ್ಮು ಮತ್ತು ಜ್ವರ ಸೇರಿದಂತೆ ಇತರ ಕಾಯಿಲೆಗಳ ಬಗ್ಗೆ ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ಮಕ್ಕಳ ಮತ್ತು ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಕೊಡುವಂತೆ ಹೇಳಿದ್ದಾರೆ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಿಕೊಳ್ಳುವ ಜೊತೆಗೆ ಕುದಿಸಿ ಆರಿಸಿದ ನೀರು, ಬಿಸಿ ಹಾಗೂ ಶುಚಿಯಾದ ಆಹಾರವನ್ನು ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಕರ್ನಾಟಕ, ತಮಿಳುನಾಡು, ಪುದುಚೇರಿ, ಆಂಧ್ರದಲ್ಲಿ ಇನ್ನೂ 2-3 ದಿನ ಮಳೆ ಮುಂದುವರಿಯಲಿದ್ದು, ಚೆನ್ನೈ ಸೇರಿದಂತೆ ತಮಿಳುನಾಡಿನ 13 ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.
Another storm / cuclone behind Mandous – heavy cold – rain for two days








