Hijab war : ಇರಾನ್ – ಹಿಜಾಬ್ ವಿರೋಧಿ ಪ್ರತಿಭಟನಾಕಾರರಿಗೆ ಗಲ್ಲು ಶಿಕ್ಷೆ?
ಇರಾನ್‌ನಲ್ಲಿ ಒಂದೆಡೆ ಹಿಜಾಬ್ ವಿರುದ್ಧದ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದರೆ, ಆ ಹೋರಾಟವನ್ನು ಹೇಗಾದರೂ ಮಾಡಿ ಹತ್ತಿಕ್ಕಬೇಕು ಎಂದು ಇರಾನ್ ಸರ್ಕಾರ ನಿರ್ಧರಿಸಿದಂತಿದೆ.
ಹಿಜಾಬ್ ವಿರುದ್ಧ ಪ್ರತಿಭಟನೆಗಳಲ್ಲಿ ಭಾಗವಹಿಸುವ ಪ್ರತಿಭಟನಾಕಾರರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ತಂತ್ರಗಾರಿಕೆಯನ್ನು ಇರಾನ್ ಸರ್ಕಾರ ಅನುಸರಿಸಿದಂತಿದೆ. ಈ ಮೂಲಕ ಕಡ್ಡಾಯವಾಗಿ ಧಾರ್ಮಿಕ ನಿಯಮಗಳನ್ನು ಪಾಲನೆ ಮಾಡಲೇಬೇಕೆಂಬ ಸೂಚನೆಯನ್ನು ಪರೋಕ್ಷವಾಗಿ ಸರ್ಕಾರ ಸಾರಿದಂತಿದೆ.
ಹಿಜಾಬ್ ವಿರುದ್ಧ ಇರಾನ್‌ನಾದ್ಯಂತ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸೋಮವಾರ ಬೆಳಗ್ಗೆ ಓರ್ವ ವ್ಯಕ್ತಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ.
ಇರಾನ್‌ನ ಮಶಾದ್ ನಗರದಲ್ಲಿ ಮಜಿದ್ರೇಜಾ ರೆಹ್ನವಾದ್ ಎಂಬಾತನಿಗೆ ನೇಣು ಶಿಕ್ಷೆ ವಿಧಿಸಿದ್ದು, ಭದ್ರತಾ ಪಡೆಗಳ ಮೇಲೆ ದಾಳಿ ಮಾಡಿದ ಆರೋಪ, ಇಬ್ಬರು ಸಿಬ್ಬಂದಿಗೆ ಚಾಕು ಇರಿತ ಹಾಗೂ ಇಬ್ಬರು ಭದ್ರತಾ ಪಡೆ ಏಜೆಂಟರ ಹತ್ಯೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನನ್ನು ಗಲ್ಲಿಗೇರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಆದರೆ ಇರಾನ್‌ನ ಸರ್ಕಾರ ವಿರೋಧಿ ಪ್ರತಿಭಟನಾಕಾರರು ಮಜಿದ್ರೇಜಾ ರೆಹ್ನವಾದ್ ಪರ ವಾದಿಸಲು ವಕೀಲರನ್ನು ನೇಮಿಸಲು ಸರ್ಕಾರ ಅವಕಾಶವನ್ನು ನೀಡಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಮಜಿದ್ರೇಜಾನನ್ನು ನ್ಯಾಯಾಲಯಕ್ಕೆ ಕರೆತರುವ ಮೊದಲು ಸಾಕಷ್ಟು ಹಿಂಸೆ ನೀಡಲಾಗಿತ್ತು ಎಂಬ ಆರೋಪಗಳನ್ನು ಮಾಡಿದ್ದಾರೆ.
ಸೆಪ್ಟೆಂಬರ್ 16 2022ರಂದು ಸರಿಯಾಗಿ ಬುರ್ಖಾ ಧರಿಸಿರಲಿಲ್ಲ ಎಂಬ ಆರೋಪದ ಮೇಲೆ 22 ವರ್ಷ ವಯಸ್ಸಿನ ಮಾಷಾ ಅಮಿನಿ ಎಂಬ ಯುವತಿಯನ್ನು ಇರಾನ್‌ನ ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗ ಆಕೆ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಆಕೆ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪವಿದೆ. ಈ ಘಟನೆ ಇರಾನ್‌ನಾದ್ಯಂತ ಹಿಜಾಬ್ ವಿರೋಧಿ ಹೋರಾಟಕ್ಕೆ ಕಿಚ್ಚು ಹಚ್ಚಿಸಿತು.
Hijab war : Iran – anti-hijab protestors to be hanged?








