ಮಾಸಿಕ 55ರೂ ಹೂಡಿಕೆ ಮಾಡಿ 3000ರೂ ಪಿಂಚಣಿ ಪಡೆಯುವ ಪ್ರಧಾನ್ ಮಂತ್ರಿ ಶ್ರಮ್ ಮಾನ್ ಧನ್
ಹೊಸದಿಲ್ಲಿ, ಜೂನ್ 13: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಶ್ರಮ ಮಾನ್ ಧನ್ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯಡಿಯಲ್ಲಿ ಮನೆ ಕೆಲಸ ಮಾಡುವವರು, ಚಮ್ಮಾರರು, ಟೈಲರ್, ರಿಕ್ಷಾ ಚಾಲಕರು, ಬಟ್ಟೆ ಒಗೆಯುವವರು, ಬೀದಿ ಮಾರಾಟಗಾರರು, ಮಿಡ್ ಡೇ ಮೀಲ್ ಕಾರ್ಮಿಕರು, ಹೆಡ್ ಲೋಡರ್, ಇಟ್ಟಿಗೆ ಕೆಲಸಗಾರರು,ಸ್ಥಳೀಯ ಕಾರ್ಮಿಕರು, ರಿಕ್ಷಾ, ಭೂಮಿರಹಿತ ಕಾರ್ಮಿಕರು, ಕೃಷಿ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮದ ಕೆಲಸಗಾರರು, ಆಡಿಯೋ-ದೃಶ್ಯ ಕೆಲಸಗಾರರು ಮತ್ತು ಇದೇ ರೀತಿಯ ಇತರ ತೊಡಗಿರುವ ಅಸಂಘಟಿತ ಕಾರ್ಮಿಕರು ತಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಅಸಂಘಟಿತ ಕಾರ್ಮಿಕರು ತಮ್ಮ ಹೆಸರನ್ನು ಈ ಯೋಜನೆಯಡಿಯಲ್ಲಿ ರಿಜಿಸ್ಟರ್ ಮಾಡಿಕೊಂಡರೆ, 60 ವರ್ಷ ಪೂರ್ಣಗೊಂಡ ಬಳಿಕ ಪ್ರತಿ ತಿಂಗಳು ಕನಿಷ್ಠ 3 ಸಾವಿರ ರೂಪಾಯಿ ಪಿಂಚಣಿ ಸಿಗಲಿದೆ.
ಅಷ್ಟೇ ಅಲ್ಲ ಒಂದು ವೇಳೆ ಲಾಭಾರ್ಥಿಗಳು ಪಿಂಚಣಿ ದೊರಕುವ ಮೊದಲೇ ಮರಣ ಹೊಂದಿದ ಪಕ್ಷದಲ್ಲಿ, ಪಿಂಚಣಿಯ ಶೇಕಡಾ 50ರಷ್ಟು ಭಾಗವನ್ನು ಅವರ ಬಾಳಸಂಗಾತಿ ಪಡೆಯಲಿದ್ದಾರೆ.
ಸರ್ಕಾರಿ ಅಂಕಿ-ಅಂಶಗಳ ಪ್ರಕಾರ ಈ ಯೋಜನೆಯಡಿಯಲ್ಲಿ ಅಸಂಘಟಿತ ವಲಯದ ಕಾರ್ಮಿಕರು ವರ್ಷಕ್ಕೆ 36 ಸಾವಿರ ರೂ. ಪಿಂಚಣಿ ಪಡೆಯಲಿದ್ದಾರೆ. ದೇಶದಾದ್ಯಂತ ಸುಮಾರು 42 ಕೋಟಿ ಜನರು ಅಸಂಘಟಿತವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಸುಮಾರು 64.5 ಲಕ್ಷ ಜನರು ಈ ಯೋಜನೆಗೆ ತಮ್ಮ ಹೆಸರನ್ನು ನೊಂದಾಯಿಸಿದ್ದಾರೆ.

ಈ ಯೋಜನೆಯಡಿಯಲ್ಲಿ ಹೆಸರು ನೊಂದಾಯಿಸಲು
1. ಅವರು ಅಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಾಗಿರಬೇಕು.
2. 18 ವರ್ಷದಿಂದ ಮತ್ತು 40 ವರ್ಷ ವಯಸ್ಸಿನವರಾಗಿರಬೇಕು
3. ತಿಂಗಳ ಆದಾಯ 15,000 ರೂ ಮೀರಿರಬಾರದು
4. ಇತರ ಯಾವುದೇ ಪಿಂಚಣಿ ಯೋಜನೆಯ ಸದಸ್ಯರಾಗಿರಬಾರದು.
ಸಲ್ಲಿಸಬೇಕಾದ ದಾಖಲೆಗಳು
1. ಆಧಾರ್ ಕಾರ್ಡ್
2. ಐಎಫ್‌ಎಸ್‌ಸಿ ಸಂಖ್ಯೆಯೊಂದಿಗೆ ಬ್ಯಾಂಕ್ ಖಾತೆ ಅಥವಾ ಜನ ಧನ್ ಖಾತೆಯ ಸಂಖ್ಯೆ.
3. ಅಧಿಕೃತ ಮೊಬೈಲ್ ಸಂಖ್ಯೆ.
ಖಾತೆ ತೆರೆಯಲು
ಹತ್ತಿರದ ಕಾಮನ್ ಸರ್ವಿಸ್ ಸೆಂಟರ್ ಗೆ ಭೇಟಿ ನೀಡಿ.
ಮೇಲೆ ಸೂಚಿಸಲಾಗಿರುವ ದಾಖಲೆಗಳನ್ನು ನೀಡಿ.
ನಿಮ್ಮ ಸರ್ವಿಸ್ ಅಕೌಂಟ್ ನ ಪಾಸ್ ಬುಕ್ ಮೇಲೆ IFSC ಕೋಡ್ ಇರುವುದನ್ನು ಖಚಿತಪಡಿಸಿಕೊಳ್ಳಿ.
ಇಷ್ಟು ಮಾತ್ರ ಅಲ್ಲದೆ ನೀವು ಭಾರತೀಯ ಜೀವ ವಿಮಾ ನಿಗಮದ ಬ್ರಾಂಚ್, ಇ.ಎಸ್.ಐ.ಸಿ, ಇ.ಪಿ.ಎಫ್.ಒ ಅಥವಾ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ತಿಂಗಳಿಗೆ ಎಷ್ಟು ಪಾವತಿಸಬೇಕು
ಯಾವುದೇ ಒಬ್ಬ ವ್ಯಕ್ತಿಯ ವಯಸ್ಸಿನ ಆಧಾರದ ಮೇಲೆ ಆ ವ್ಯಕ್ತಿ ಎಷ್ಟು ಪಾವತಿಸಬೇಕು ಎಂಬುವುದನ್ನು ನಿರ್ಧರಿಸಲಾಗುತ್ತದೆ.
ಒಂದು ವೇಳೆ ವ್ಯಕ್ತಿಯ ವಯಸ್ಸು 18 ವರ್ಷ ಆಗಿದ್ದರೆ, ಅವರು ಪ್ರತಿ ತಿಂಗಳಿಗೆ ರೂ.55ರನ್ನು ಪಾವತಿಸಬೇಕು.
ಒಂದು ವೇಳೆ ವ್ಯಕ್ತಿಯು 40 ವರ್ಷದವರಾಗಿದ್ದರೆ ಅವರು ಮಾಸಿಕ 200ರೂ ಅನ್ನು ಪಾವತಿಸಬೇಕು.
ಈ ಹಣವನ್ನು ಅವರು 60 ವರ್ಷ ಪೂರ್ಣಗೊಳಿಸುವವರೆಗೆ ಪಾವತಿಸಬೇಕು.
ಯಾರು ಈ ಯೋಜನೆಗೆ ಸೇರಲು ಅರ್ಹರಲ್ಲ
ಇ.ಪಿ.ಎಫ್/ಎನ್.ಪಿ.ಎಸ್/ಇ.ಎಸ್.ಐ.ಸಿ ಯೋಜನೆಗೆ ಹಣ ಪಾವತಿಸುವ ನೌಕರರು ಅಥವಾ ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಗೆ ಸದಸ್ಯರಾಗಲು ಅರ್ಹರಲ್ಲ.








