ಟಿ-20 ಗೆ ಗುಡ್ ಬೈ ಹೇಳ್ತಾರಾ ಕ್ರಿಕೆಟ್ ರಾಕ್ಷಸ?
“ನನ್ನ ಮೇಲಿನ ಜವಾಬ್ದಾರಿಗಳಲ್ಲಿ ಒಂದನ್ನು ಕೈ ಬಿಡುತ್ತೇನೆ”
ಅಭಿಮಾನಿಗಳ ಆತಂಕಕ್ಕೆ ಕಾರಣವಾದ ವಿರಾಟ್ ಹೇಳಿಕೆ
ಕ್ರಿಕೆಟ್ ದುನಿಯಾದ ಹುಲಿಯಾ.. ರನ್ ರಾಕ್ಷಸ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಟಿ-20ಗೆ ವಿದಾಯ ಹೇಳ್ತಾರಾ? ವಿರಾಟ್ ಕೊಹ್ಲಿ, ನನ್ನ ಮೇಲಿನ ಜವಾಬ್ದಾರಿಗಳಲ್ಲಿ ಒಂದನ್ನು ಕೈ ಬಿಡುತ್ತೇನೆ ಎಂದಿದ್ದೇಕೆ..? ಸದ್ಯ ಕ್ರೀಡಾಭಿಮಾನಿಗಳಿಗೆ ಬಿಟ್ಟು ಬಿಡದೆ ಕಾಡುತ್ತಿರುವ ಪ್ರಶ್ನೆಗಳಿವು. ಅಂದ್ಹಾಗೆ ಈ ಪ್ರಶ್ನೆಗಳು ಹುಟ್ಟಲು ಕಾರಣವಾಗಿದ್ದು,ಕಿವೀಸ್ ವಿರುದ್ಧ ಸರಣಿ ಬಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಅವರ ಹೇಳಿಕೆ.
ಹೌದು..! ಟೆಸ್ಟ್ ಸರಣಿಗೆ ಸಂಬಂಧಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್, ಮೂರು ಮಾದರಿ ಕ್ರಿಕೆಟ್ ನಲ್ಲೂ ಮುಂದಿನ 3 ವರ್ಷ ಸಮರ್ಥವಾಗಿ ಆಡಲು ನನ್ನನ್ನು ನಾನು ಸಿದ್ಧಪಡಿಸಿಕೊಂಡಿದ್ದೇನೆ. ಜೊತೆಗೆ 3 ವರ್ಷದ ಬಳಿಕ ನನ್ನ ಮೇಲಿನ ಜವಾಬ್ದಾರಿಗಳಲ್ಲಿ ಒಂದನ್ನು ಕೈ ಬಿಡುವ ಬಗ್ಗೆ ಯೋಚಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಬೇಸರ ಹೊರ ಹಾಕಿದ ವಿರಾಟ್
2021 ಟಿ-20 ವಿಶ್ವಕಪ್ ನ ಬಳಿಕ ನೀವು ಟಿ-20 ಮಾದರಿಯಿಂದ ನಿವೃತ್ತಿ ಆಗುವ ಯೋಚನೆ ನಿಮ್ಮಲ್ಲಿದೆಯೇ ಎನ್ನುವ ಪ್ರಶ್ನೆಯೊಂದಕ್ಕೆ ವಿರಾಟ್ ಕೊಹ್ಲಿ ಉತ್ತರಿಸುತ್ತಾ ”ಹೆಚ್ಚುಕಮ್ಮಿ ಕಳೆದ 8 ವರ್ಷಗಳಿಂದ ಪ್ರಾಕ್ಟೀಸ್ ಸೆಷನ್ ಹಾಗೂ ಟ್ರಾವೆಲಿಂಗ್ ಸೇರಿದಂತೆ ವರ್ಷಕ್ಕೆ 300 ದಿನ ಕ್ರಿಕೆಟ್ ನಲ್ಲಿ ಕಳೆಯುತ್ತಿದ್ದೇನೆ. ಎಲ್ಲಿಯೂ ನನ್ನ ಕ್ಷಮತೆ ಹಾಗೂ ಬದ್ಧತೆ ಈ ನಿಟ್ಟಿನಲ್ಲಿ ಕಡಿಮೆಯಾಗಿಲ್ಲ. ಆದರೆ ಹೀಗೆ ಇರುತ್ತದೆ ಎನ್ನುವುದಕ್ಕೂ ಆಗುವುದಿಲ್ಲ ಎಂದಿದ್ದಾರೆ.”
ಮೂರು ಫಾರ್ಮೆಟ್ ಗಳಲ್ಲಿ ಆಡುವ ಆಟಗಾರರು ನಿಗದಿಗಿಂತ ಹೆಚ್ಚಿನ ವಿಶ್ರಾಂತಿಯನ್ನು ಬಯಸುತ್ತಾರೆ. ಆದರೆ, ಬ್ಯುಸಿ ಶೆಡ್ಯೂಲ್ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಮೇಲಾಗಿ ಸದ್ಯದ ಮಟ್ಟಿಗೆ 3 ಫಾರ್ಮೆಟ್ ನ ಆಟದಲ್ಲೂ ನಾನು ಫಿಟ್ ಆಗಿದ್ದೇನೆ. ಆದ್ರೆ ನನಗೆ 34 ಅಥವಾ 35 ವರ್ಷವಾದಾಗ, ನನ್ನ ದೇಹ ನನ್ನ ಆಟಕ್ಕೆ ಸಹಕರಿಸುವುದಕ್ಕೆ ನಿರಾಕರಿಸಬಹುದು. ಆ ಸಂದರ್ಭದಲ್ಲಿ ನನ್ನ ಅಭಿಪ್ರಾಯ ಬೇರೆಯದ್ದೆ ಆಗುವ ಸಾಧ್ಯತೆ ಇದೆ ಎಂದಿದ್ದಾರೆ.
ಒಟ್ಟಾರೆ ವಿರಾಟ್ ಕೊಹ್ಲಿ ಅವರ ಈ ಹೇಳಿಕೆ ನಾನಾ ಪ್ರಶ್ನೆಗಳಿಗೆ ನಾಂದಿಯಾಡಿದ್ದು, ಮುಂದಿನ ದಿನಗಳಲ್ಲಿ ವಿರಾಟ್ ಯಾವುದಾದರೂ ಒಂದು ಮಾದರಿ ಕ್ರಿಕೆಟ್ ಗೆ ವಿದಾಯ ಹೇಳುವುದು ಪಕ್ಕಾ ಎನ್ನಲಾಗುತ್ತಿದೆ.