ಫೆಬ್ರವರಿ 14 2019ರಂದು ನಡೆದ ಪುಲ್ವಾಮಾ ದಾಳಿಗೆ ವರ್ಷವೊಂದು ಕಳೆದಿದೆ. ಭಾರತೀಯರು ಇನ್ನೂ ಆ ಆಘಾತದಿಂದ ಹೊರಬಂದಿಲ್ಲ. ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ರಾದ ಭಾರತೀಯ ಯೋಧರಲ್ಲಿ 10 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಡೆಹ್ರಾಡೂನ್ ನಿವಾಸಿ ವಿಭೂತಿ ದೌಂಡಿಯಾಲ್ ಕೂಡ ಒಬ್ಬರು. ವಿಭೂತಿ ದೌಂಡಿಯಾಲ್ ಅವರ ಪಾರ್ಥಿವ ಶರೀರದ ಮುಂದೆ ಅವರ ಪತ್ನಿ ನಿಕಿತಾ ಕೌಲ್ ದೌಂಡಿಯಾಲ್ ಕಣ್ಣೀರು ಹಾಕುತ್ತಾ, ಕಿವಿಯಲ್ಲಿ ‘ಐ ಲವ್ ಯೂ ವಿಭೂ.. ನೀನು ನಮ್ಮೊಂದಿಗಿಲ್ಲ ಎಂಬ ನೋವು ಯಾವತ್ತೂ ಕಾಡಲಿದೆ. ಆದರೆ ನೀನು ಯಾವತ್ತೂ ನನ್ನೊಂದಿಗೆ ಇರುತ್ತೆ ಎಂದು ನನಗೆ ತಿಳಿದಿದೆ’ ಎಂದಿದ್ದರು. ಜನರನ್ನು ಉದ್ದೇಶಿಸಿ ‘ಯಾರೂ ನಮಗೆ ಸಹಾನುಭೂತಿ ತೋರಿಸಬೇಡಿ. ಧೈರ್ಯದಿಂದಿರಿ ಹಾಗೂ ಈ ವೀರ ಯೋಧನಿಗೆ ಸೆಲ್ಯೂಟ್ ಮಾಡಿ’ ಎಂದಿದ್ದರು. ನಿಕಿತಾ ಕೌಲ್ ಮಾತು ಇಡೀ ದೇಶಕ್ಕೆ ದೇಶವನ್ನೇ ಭಾವುಕರನ್ನಾಗಿಸಿತ್ತು.
ಇದೀಗ ನಿಕಿತಾ ಕೌಲ್ ತನ್ನ ಪತಿಯ ಅದೇ ಸಮವಸ್ತ್ರ ತೊಟ್ಟು ದೇಶ ಸೇವೆ ಸಲ್ಲಿಸಲು ಸಜ್ಜಾಗಿ ನಿಂತಿದ್ದಾರೆ. ಪತಿಯ ಆಗಲಿಕೆಯ ನೋವಿನ ನಡುವೆ ಸೂಕ್ತ ತರಬೇತಿ ಪಡೆದು, ಇದೀಗ ಶಾರ್ಟ್ ಸರ್ವೀಸಸ್ ಕಮಿಷನ್ ನ (ಎಸ್.ಎಸ್.ಸಿ) ಪರೀಕ್ಷೆ ಮತ್ತು ಅನಂತರ ನಡೆದ ಸಂದರ್ಶನದಲ್ಲಿ ತೇರ್ಗಡೆಯಾಗಿದ್ದಾರೆ. ನೇಮಕಾತಿಗಾಗಿ ಕಾಯುತ್ತಿರುವ ನಿಕಿತಾ ಕೌಲ್ ಪತಿಯ ಮೇಲಿನ ಪ್ರೀತಿಯನ್ನು ದೇಶಸೇವೆಯ ಮೂಲಕ ಸಲ್ಲಿಸಲು ಹೊರಟಿದ್ದಾರೆ.








