ಮಹಾರಾಷ್ಟ್ರದಲ್ಲಿ ಲಕ್ಷದ ಗಡಿ ದಾಟಿದ ಕೊರೊನಾ ಪ್ರಕರಣ

ಮುಂಬೈ, ಜೂನ್ 14: ಕೊರೋನಾ ಹಾವಳಿಗೆ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ. ರಾಜ್ಯದಲ್ಲಿ ಶನಿವಾರ 3,428 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಇಲ್ಲಿಯವರೆಗೆ ಪತ್ತೆಯಾದ ಕೊರೊನಾ ಪ್ರಕರಣಗಳು ಸಂಖ್ಯೆ 1,04,568ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಪತ್ತೆಯಾದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಿನ ಪ್ರಕರಣಗಳು ಮಹಾರಾಷ್ಟ್ರದಿಂದ ವರದಿಯಾಗಿದೆ. ಮಹಾರಾಷ್ಟ್ರದ ರಾಜಧಾನಿ ಮತ್ತು ದೇಶದ ವಾಣಿಜ್ಯ ನಗರ ಮುಂಬೈನಲ್ಲಿ ಶನಿವಾರ 1,380 ಹೊಸ ಪ್ರಕರಣಗಳು ಮತ್ತು 69 ಸಾವುಗಳು ದಾಖಲಾಗಿವೆ. ಮುಂಬೈನಲ್ಲಿ ಇಲ್ಲಿಯವರೆಗೆ 56,831 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು 2,113 ಮಂದಿ ಸಾವನ್ನಪ್ಪಿದ್ದಾರೆ. ಮುಂಬೈನ ಸ್ಲಂ ಧಾರವಿಯಲ್ಲಿ ಶನಿವಾರ 17ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಲ್ಲಿಯವರೆಗೆ ಒಟ್ಟು 2030 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಪುಣೆಯಲ್ಲಿ ಶನಿವಾರ 441 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 11,722ಕ್ಕೆ ಏರಿದೆ. ಥಾಣೆಯಲ್ಲಿ 863 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 17,306ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ ಶನಿವಾರ 1,550 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ ಗುಣಮುಖರಾಗಿ ತೆರಳಿದವರ ಸಂಖ್ಯೆ 49,346 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈಗ 51,392 ಸಕ್ರಿಯ ಪ್ರಕರಣಗಳಿದ್ದು, ಇಲ್ಲಿಯವರೆಗೆ 3,717 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ರಾಜ್ಯದ ಆರೋಗ್ಯ ಇಲಾಖೆ ತಿಳಿಸಿದೆ.








