ಬೆಂಗಳೂರು : ಹಿಂದೂ, ಮುಸ್ಲಿಂ. ಕ್ರಿಶ್ಚಿಯನ್, ಬೌದ್ಧ, ಧರ್ಮ ಯಾವುದಾದರೇನು ರಕ್ತವೊಂದೆ. ಜಾತಿ ಯಾವುದಾದರೇನು ದೇಹದಲ್ಲಿರುವ ರಕ್ತದ ಬಣ್ಣವೊಂದೆ. ಮನುಷ್ಯನಲ್ಲಿ ಭಿನ್ನತೆಯಿದೆ. ಮನುಷ್ಯನ ದೇಹದಲ್ಲಿ ಸಂಚರಿಸುವ ರಕ್ತಕ್ಕೆ ಯಾವುದೇ ಭಿನ್ನತೆಯಿಲ್ಲ.
ಪ್ರತಿ ನಿತ್ಯ ಜಗತ್ತಿನಲ್ಲಿ ಪ್ರತಿ ಕ್ಷಣ ಲೆಕ್ಕವಿಲ್ಲದಷ್ಟು ಜನ ರಕ್ತದ ಅಗತ್ಯದಲ್ಲಿರುತ್ತಾರೆ. ಸಾಕಷ್ಟು ಮಂದಿ ರಕ್ತ ಬೇಕು ಎಂದು ಅಲೆಯುತ್ತಾರೆ. ಯಾಕೆಂದರೆ ದೇಹದಲ್ಲಿ ರಕ್ತವಿದ್ದರೆ ಮಾತ್ರ ಜೀವ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜೂನ್ 14 ರಂದು ವಿಶ್ವ ರಕ್ತದಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಜೂನ್ 14 ರಂದು ಆಚರಣೆ ಯಾಕೆ
ಆಸ್ಟ್ರಿಯಾ ದೇಶದ ಕಾರ್ಲ್ ಲ್ಯಾಂಡ್ ಸ್ಟೇನರ್ ಎಂಬ ವೈದ್ಯ ಮಾನವನ ರಕ್ತದ ಮೊದಲ ಮೂರು ಗ್ರೂಪ್ ಗಳನ್ನು ಸಂಶೋಧಿಸಿದ್ದರು. ಹಾಗಾಗಿ ಅವರ ಜನ್ಮದಿನವಾದ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ಆದರೆ ಭಾರತದಲ್ಲಿ ಅಕ್ಟೋಬರ್ 1 ರಂದಯ ರಾಷ್ಟ್ರೀಯ ರಕ್ತದಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
ರಕ್ತದಾನದ ಮಹತ್ವ ಸಾರಿದ ಸಿಎಂ ಯಡಿಯೂರಪ್ಪ
ರಕ್ತದಾನಿಗಳಿಗೆ ಶುಭಾಶಯ ತಿಳಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈ ವಿಶ್ವ ರಕ್ತದಾನಿಗಳ ದಿನದಂದು, ಪ್ರತಿಯೊಬ್ಬರೂ ರಕ್ತದಾನದ ಕುರಿತು ಕರ್ತವ್ಯನಿಷ್ಠರಾಗುವ ನಿಟ್ಟಿನಲ್ಲಿ ದೃಢಸಂಕಲ್ಪ ಮಾಡೋಣ, ಮಾನವೀಯತೆಯನ್ನು ಸಂಭ್ರಮಿಸೋಣ. ರಕ್ತದಾನದ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡೋಣ. ಈ ಪವಿತ್ರ ಕಾಯಕದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಪ್ರತಿಯೊಬ್ಬರನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.








