ಸಾವಿಗೆ ಶರಣಾಗುವ ಮುನ್ನ ಬೆಳ್ಳಿಪರದೆಯ ಧೋನಿಗೆ ರಿಯಲ್ ಧೋನಿಯ ನೆನಪು ಬರುತ್ತಿದ್ರೆ….!
ಇದು ನಿಜಕ್ಕೂ ಶಾಕಿಂಗ್ ನ್ಯೂಸ್. ನಂಬಲು ಸಾಧ್ಯವಿಲ್ಲ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಣ ಇನ್ನೂ ನಿಗೂಢ. ಆದ್ರೆ ಬೆಳ್ಳಿ ಪರದೆಯ ಮೇಲೆ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಪಾತ್ರಕ್ಕೆ ಜೀವ ತುಂಬಿದ್ದ ನಟ ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂದ್ರೆ ಒಂದು ಕ್ಷಣ ನಂಬುವುದು ಕಷ್ಟ.
ಮುಂಬೈನ ತನ್ನ ನಿವಾಸದಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗುತ್ತಾರೆ ಅಂದ್ರೆ ಅವರ ಬದುಕು ಅಷ್ಟೊಂದು ಜರ್ಜರಿತವಾಗಿತ್ತಾ ? ಗೊತ್ತಿಲ್ಲ. ಬದುಕಿನಲ್ಲಿ ಕಷ್ಟ ಎಷ್ಟೇ ಇರಬಹುದು. ಆದ್ರೆ ಅದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದೇ ಪರಿಹಾರನಾ ? ರೀಲ್ ಲೈಫ್ ನಲ್ಲಿ ಆತ್ಮವಿಶ್ವಾಸದಿಂದ ನಟನೆ ಮಾಡುತ್ತಿದ್ದ ನಟ ರಿಯಲ್ ಲೈಫ್‍ನಲ್ಲಿ ಆತ್ಮವಿಶ್ವಾಸವನ್ನೇ ಕಳೆದುಕೊಂಡ್ರಾ ? ಉತ್ತರ ಕೊಡಲು ಅವರೇ ಇಲ್ಲ. ಸಾವಿನಲ್ಲೂ ಪ್ರಶ್ನೆ ಮೂಡಿಸಿ ಬಾರದ ಲೋಕಕ್ಕೆ ಹೋದ್ರು.
2016ರಲ್ಲಿ ಮಹೇಂದ್ರ ಸಿಂಗ್ ಧೋನಿಯವರ ಆನ್ ಟೋಲ್ಟ್ ಸ್ಟೋರಿ ಸಿನಿಮಾದಲ್ಲಿ ಧೋನಿಯ ಪಾತ್ರಕ್ಕೆ ಜೀವ ತುಂಬಿದ್ದರು ನಟ ಸುಶಾಂತ್. ಧೋನಿಯ ಹಾವಭಾವಗಳನ್ನು ಅಧ್ಯಯನ ಮಾಡಿಕೊಂಡಿದ್ದರು. ಚಿತ್ರದ ಪಾತ್ರದಲ್ಲಿ ಸುಶಾಂತ್ ಅವರು ವಿಕೆಟ್ ಕೀಪಿಂಗ್ ಕೂಡ ಮಾಡಬೇಕಾಗಿತ್ತು. ಹೀಗಾಗಿ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ ಬಗ್ಗೆ ಸುಶಾಂತ್ ಸಿಂಗ್ ರಜಪೂತ್ ಅವರು ಭಾರತದ ಮಾಜಿ ವಿಕೆಟ್ ಕೀಪರ್ ಕಿರಣ್ ಮೊರೆ ಬಳಿ ತರಬೇತಿ ಕೂಡ ಪಡೆದುಕೊಂಡಿದ್ದರು. ಅದು ಕೂಡ ಒಂದೆರಡು ದಿನವಲ್ಲ. ಸುಮಾರು ಮೂರು ತಿಂಗಳು,
ಧೋನಿಯಂತೆ ವಿಕೆಟ್ ಕೀಪಿಂಗ್ ಮಾಡುವುದು ಮಾತ್ರ ಸುಶಾಂತ್‍ಗೆ ಸವಾಲು ಆಗಿರಲಿಲ್ಲ. ಧೋನಿಯಂತೆ ಬ್ಯಾಟ್ ಬೀಸುವುದು ಕೂಡ ಸವಾಲಾಗಿತ್ತು. ಧೋನಿಯ ಬ್ಯಾಟಿಂಗ್ ಶೈಲಿಯ ಜೊತೆಗೆ ಸಿಗ್ನೇಚರ್ ಶಾಟ್ ಹೆಲಿಕಾಪ್ಟರ್ ಶಾಟ್ಸ್‍ಗೂ ಸುಶಾಂತ್ ಗಂಟೆಗಟ್ಟಲೇ ನೆಟ್ಸ್ ನಲ್ಲಿ ತರಬೇತಿ ಪಡೆದಿದ್ದರು. ಅಲ್ಲದೆ ಧೋನಿಯ ಹಾವಭಾವಗಳು, ಅವರ ಹೇರ್‍ಸ್ಟೇಲ್, ಧೋನಿಯ ಬಿಂದಾಸ್ ಲೈಫ್ ಸ್ಟೈಲ್ ಹೀಗೆ ಪ್ರತಿಯೊಂದನ್ನು ಕೂಡ ಸುಶಾಂತ್ ಅಚ್ಚು ಕಟ್ಟಾಗಿ ನಿಭಾಯಿಸಿದ್ದರು. ಒಟ್ಟಿನಲ್ಲಿ ಚಿತ್ರದಲ್ಲಿ ಧೋನಿ ಪಾತ್ರಕ್ಕೆ ಒಂಚೂರು ಕಪ್ಪು ಚುಕ್ಕೆಯಾಗದಂತೆ ಸುಶಾಂತ್ ನಟಿಸಿದ್ದರು.
ಒಂದು ಪಾತ್ರಕ್ಕೆ ಜೀವ ತುಂಬಬೇಕಾದ್ರೆ ಅದಕ್ಕಾಗಿ ಸಾಕಷ್ಟು ಹೋಮ್ ವರ್ಕ್ ಮಾಡಬೇಕು. ಹಾಗೇ ಸುಶಾಂತ್ ಕೂಡ. ತಾನು ವಿಶ್ವದ ಶ್ರೇಷ್ಠ ಆಟಗಾರ, ಚಾಣಕ್ಯ ನಾಯಕನ
ಕುರಿತ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಸುಶಾಂತ್ ಕೂಡ ಸಾಕಷ್ಟು ಪೂರ್ವ ತಯಾರಿಗಳನ್ನು ಮಾಡಿಕೊಂಡಿದ್ದರು. ಬಹುಶಃ ಧೋನಿ ಚಿತ್ರ ನೋಡಿದಾಗ ಧೋನಿಯ ಮುಖ ಮತ್ತು ದೇಹ ಮಾತ್ರ ಬದಲಾದಂತೆ ಕಾಣುತ್ತದೆ. ಅದನ್ನು ಬಿಟ್ಟು ಧೋನಿಯನ್ನು ನೋಡಿದಂತೆ ಚಿತ್ರದಲ್ಲೂ ಭಾಸವಾಗುತ್ತಿತ್ತು.
ಆದ್ರೆ ಪ್ರಶ್ನೆ ಅದಲ್ಲ. ಧೋನಿಯ ಪಾತ್ರದಲ್ಲಿ ನಟಿಸಿ ಸುಶಾಂತ್ ಧೋನಿಯಂತೆ ಮಾನಸಿಕವಾಗಿ ಗಟ್ಟಿಯಾಗಿಲ್ಲ ಯಾಕೆ ಅನ್ನೋದು ? ಧೋನಿ ಚಿತ್ರದಲ್ಲಿ ಬದುಕಿನಲ್ಲಿ
ಏನೆಲ್ಲಾ ಕಷ್ಟಪಟ್ಟಿದ್ದಾರೆ, ಕ್ರಿಕೆಟ್ ಆಟಗಾರನಾಗಲು ಪಟ್ಟ ಶ್ರಮ. ಆ ನಂತರ ಟೀಮ್ ಇಂಡಿಯಾದ ಆಟಗಾರನಾಗಿ, ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ರೀತಿ ಹೀಗೆ ಎಲ್ಲಾ ವಿಚಾರಗಳನ್ನು ಸುಶಾಂತ್ ತಿಳಿದುಕೊಂಡಿದ್ದಾರೆ. ಬದುಕು ಹೇಗಿರುತ್ತೆ ಎಂಬುದು ಧೋನಿಯ ಬದುಕನ್ನು ನೋಡಿಕೊಂಡು ನಾವು ಅರ್ಥ ಮಾಡಿಕೊಳ್ಳಬಹುದು. ಬದುಕಿನಲ್ಲಿ ಏರಿಳಿತಗಳು ಅದಾಗ ಏನು ಮನಸ್ಸನ್ನು ಯಾವ ರೀತಿ ಹಿಡಿತದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಸಹ ಧೋನಿಯಲ್ಲಿ ಕಾಣಬಹುದಾಗಿದೆ.
ಆದರೆ ಧೋನಿಯ ಬದುಕಿಗೆ ಜೀವ ತುಂಬಿದ ನಟನಿಗೆ ತನ್ನ ಬದುಕನ್ನು ಸರಿಪಡಿಸಲು ಯಾಕೆ ಆಗಲಿಲ್ಲ. ಅಷ್ಟಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಯಾದ್ರೂ ಯಾಕೆ ಬಂತು ? ಸಮಸ್ಯೆ ಎಂಥಹುದ್ದೇ ಇರಲಿ, ಅದಕ್ಕೊಂದು ಪರಿಹಾರವಂತೂ ಇದ್ದೇ ಇದೆ. ಸ್ವಲ್ಪ ಮನಸ್ಸನ್ನು ಗಟ್ಟಿ ಮಾಡಿಕೊಂಡು ಯೋಚನೆ ಮಾಡುತ್ತಿದ್ರೆ ಸುಶಾಂತ್ ಪ್ರಾಣ ಉಳಿಯುತ್ತಿತ್ತೋ ಏನೋ..! ಆದ್ರೆ ಸುಶಾಂತ್‍ಗೆ ಜೀವನವೇ ಬೇಡ ಅಂತ ಅನ್ನಿಸಿರಬೇಕು.








