Aero India 2023 : 2025ರ ವೇಳೆಗೆ 5 ಬಿಲಿಯನ್ ಡಾಲರ್ ರಕ್ಷಣಾ ರಫ್ತು ಸರ್ಕಾರದ ಗುರಿ – ಪ್ರಧಾನಿ ಮೋದಿ..
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋ 14 ನೇ ಆವೃತ್ತಿಯನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಏರೋ ಇಂಡಿಯಾ 2023, ಏಷ್ಯಾದ ಅತಿದೊಡ್ಡ ಏರೋ ಶೋ ಫೆಬ್ರವರಿ 13 ರಿಂದ ಫೆಬ್ರವರಿ 17 ರವರೆಗೆ ನಡೆಯಲಿದೆ.
ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ “2024-25ರ ವೇಳೆಗೆ ರಕ್ಷಣಾ ರಫ್ತುಗಳನ್ನ 5 ಬಿಲಿಯನ್ ಡಾಲರ್‌ಗೆ ಕೊಂಡೊಯ್ಯುವುದು ಸರ್ಕಾರದ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತವು ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ರಕ್ಷಣಾ ಉತ್ಪಾದನಾ ನೆಲೆಯಾಗಲಿದೆ ಎಂದು ಅವರು ಹೇಳಿದರು.
ಇಂದು ರಾಷ್ಟ್ರ ಹೊಸ ಎತ್ತರವನ್ನು ಮುಟ್ಟುತ್ತಿದೆ ಮತ್ತು ಏರೋ ಇಂಡಿಯಾ 2023 ಇದಕ್ಕೆ ಪ್ರಮುಖ ಉದಾಹರಣೆಯಾಗಿದೆ ಎಂದು ಹೇಳಿದರು. ಏರೋ ಇಂಡಿಯಾದ ಥೀಮ್ – ದ ರನ್ ವೇ ಟು ಎ ಬಿಲಿಯನ್ ಆಪರ್ಚುನಿಟೀಸ್ – ವಿವಿಧ ಕ್ಷೇತ್ರಗಳಲ್ಲಿ ದೇಶದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ರಕ್ಷಣಾ ಕ್ಷೇತ್ರದಲ್ಲಿ ದೇಶವನ್ನು ಬಲಿಷ್ಠಗೊಳಿಸುವಂತೆ ಕರ್ನಾಟಕದ ಯುವಕರಿಗೆ ಮನವಿ ಮಾಡಿದರು. ತಂತ್ರಜ್ಞಾನ ಕ್ಷೇತ್ರದಲ್ಲಿ ಅವರ ಅಪಾರ ಪರಿಣತಿಯನ್ನು ಅವರು ಶ್ಲಾಘಿಸಿದರು.
ತಂತ್ರಜ್ಞಾನ ಲೋಕದಲ್ಲಿ ಪ್ರಭುತ್ವ ಸಾಧಿಸಿರುವ ರಾಜ್ಯದಲ್ಲಿ ಏರೋ ಇಂಡಿಯಾ ನಡೆಯುತ್ತಿದೆ ಎಂದರು. ಇದು ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು. 21ನೇ ಶತಮಾನದ ಭಾರತವು ಒಂದೇ ಒಂದು ಅವಕಾಶವನ್ನು ಹಾದುಹೋಗಲು ಬಿಡುವುದಿಲ್ಲ ಎಂದು ಪ್ರಧಾನಿ ಪ್ರತಿಪಾದಿಸಿದರು. ಈ ಸಂದರ್ಭದಲ್ಲಿ ಏರೋ ಇಂಡಿಯಾ 2023ರ ಸ್ಮರಣಾರ್ಥ ಅಂಚೆಚೀಟಿಯನ್ನೂ ಮೋದಿ ಬಿಡುಗಡೆ ಮಾಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರಧಾನಿಯವರ ಸಮರ್ಥ ನಾಯಕತ್ವದಲ್ಲಿ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ನಾಯಕನಾಗಿ ಹೊರಹೊಮ್ಮುತ್ತಿದೆ. ಏರೋ ಇಂಡಿಯಾ ರಕ್ಷಣಾ ಕ್ಷೇತ್ರಕ್ಕೆ ಹೊಸ ಶಕ್ತಿ ಒದಗಿಸಿದೆ ಎಂದರು. ಭಾರತದ ಆರ್ಥಿಕತೆಯ ಬೆಳವಣಿಗೆಗೆ ಪ್ರಧಾನ ಮಂತ್ರಿಗಳು ಬಲವಾಗಿ ಬದ್ಧರಾಗಿದ್ದಾರೆ ಮತ್ತು ಏರೋ ಇಂಡಿಯಾ ಇದರ ಅಭಿವ್ಯಕ್ತಿಯಾಗಿದೆ ಎಂದು ಅವರು ಹೇಳಿದರು. ಹಲವು ದೇಶಗಳ ರಕ್ಷಣಾ ಸಚಿವರು, ಸಿಇಒಗಳು ಮತ್ತು ಸೇವಾ ಮುಖ್ಯಸ್ಥರು ಏರೋ ಇಂಡಿಯಾದಲ್ಲಿ ಭಾಗವಹಿಸುತ್ತಿದ್ದು ಇದು ಭಾರತದ ರಕ್ಷಣಾ ಉತ್ಪಾದನಾ ಪಯಣಕ್ಕೆ ಉತ್ತೇಜನ ನೀಡಲಿದೆ ಎಂದರು.
Aero India 2023: Government’s target of defense exports of 5 billion dollars by 2025 – PM Modi.








