ಮೈಸೂರು : ಕೊರೊನಾ ಸಂಕಷ್ಟದ ನಡುವೆ ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ಚುಟುವಟಿಕೆಗಳು ಗರಿಗೆದರಿವೆ. ಮೂರು ಪಕ್ಷಗಳಲ್ಲೂ ಆಕಾಂಕ್ಷಿಗಳು ಪರಿಷತ್ ಟಿಕೆಟ್ ಗಾಗಿ ಭಾರಿ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳದ್ದು ಒಂದು ಕಥೆಯಾದ್ರೆ ಕಮಲ ಪಡೆಯಲ್ಲಿ ಆಕಾಂಕ್ಷಿಗಳ ಪರ ಪಕ್ಷದ ನಾಯಕರು ಬ್ಯಾಟಿಂಗ್, ಬೌಲಿಂಗ್ ಮಾಡುತ್ತಿದ್ದಾರೆ. ಅದರಲ್ಲೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣರಾದ ನಾಯಕರಿಗೆ ಪರಿಷತ್ ಟಿಕೆಟ್ ನೀಡಬೇಕೆಂದು ವಲಸೆ ಬಿಜೆಪಿ ನಾಯಕರು( ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಶಾಸಕರು) ಪಟ್ಟು ಹಿಡಿದಿದ್ದಾರೆ.
ಆದ್ರೆ ಮೂಲ ಬಿಜೆಪಿ ನಾಯಕರು ಹೇಳ್ತಿರೋದೆ ಬೇರೆ. ನಾವು ಅವರಿಗೆ ಬೈ ಎಲೆಕ್ಷನ್ ನಲ್ಲಿ ಟಿಕೆಟ್ ಕೊಟ್ಟಿದ್ವಿ, ಅದರಲ್ಲಿ ಸೋತಿದ್ದಾರೆ. ಪರಿಷತ್ ಟಿಕೆಟ್ ನೀಡುತ್ತೇವೆ ಎಂದು ಎಲ್ಲೂ ಹೇಳಿಲ್ಲ ಎಂದು ಸ್ವತಃ ಡಿಸಿಎಂ ಅಶ್ವಥ್ ನಾರಾಯಣ ಅವರೇ ಹೇಳಿದ್ದಾರೆ.
ಇದೀಗ ಇದೇ ವಿಚಾರವಾಗಿ ತೋಟಗಾರಿಕೆ ಸಚಿವ ನಾರಾಯಣಗೌಡ ಪ್ರತಿಕ್ರಿಯೆ ನೀಡಿದ್ದು, ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ವಿಶ್ವನಾಥ್ ಕೂಡಾ ಕಾರಣರಾಗಿದ್ದು, ವಿಧಾನ ಪರಿಷತ್ ಚುನಾವಣೆಯಲ್ಲಿ ಮಾಜಿ ಸಚಿವ ಎಚ್. ವಿಶ್ವನಾಥ್ ಅವರಿಗೆ ಟಿಕೆಟ್ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ವಿಶ್ವನಾಥ್ ಕೂಡಾ ಕಾರಣರಾಗಿದ್ದು, ಕೊಟ್ಟ ಮಾತಿನಂತೆ ಬಿಜೆಪಿ ಹೈಕಮಾಂಡ್ ನಡೆದುಕೊಳ್ಳುವುದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ವಿಶ್ವನಾಥ್ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆ. ನಮ್ಮ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವುದು ನಿಜ. ಹೀಗಾಗಿ ಹೈಕಮಾಂಡ್ ನಿರ್ಧಾರ ಮಾಡಲಿದೆ” ಎಂದು ನಾರಾಯಣಗೌಡ ಹೇಳಿದರು.
ಇನ್ನೂ ಇದೇ ವೇಳೆ ಭೂ ಸುಧಾರಣಾ ಕಾಯಿದೆ ತಿದ್ದುಪಡಿ ಬಗ್ಗೆ ಪ್ರತಿಕ್ರಿಯಿಸಿದ ನಾರಾಯಣಗೌಡ, ಈ ಕಾಯಿದೆಯಿಂದ ರೈತರಿಗೆ ಅನುಕೂಲವಾಲಿದೆ ಎಂದು ಅಭಿಪ್ರಾಯಪಟ್ಟರು.