ಬೆಂಗಳೂರು : ಇಂದು ಸಂಜೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಹಾಗಾಗಿ ಎಲ್ಲರ ಚಿತ್ತ ಬಿಜೆಪಿ ಸಭೆ ಮೇಲಿದೆ. ಇದೆ ವೇಳೆ ಸಭೆ ನಡೆಯುವ ವೇಳೆ ಕೋರ್ ಕಮಿಟಿ ಸದಸ್ಯರು ಬಿಟ್ಟು ಬೇರೆ ಯಾರು ಬರಬಾರದು ಎಂದು ಪಕ್ಷ ಹೇಳಿದೆ. ಬಿಜೆಪಿ ಶಾಸಕರು, ಸಂಸದರು ಸೇರಿದಂತೆ ಬಿಜೆಪಿ ನಾಯಕರು ಯಾರು ಸಹ ಪಕ್ಷದ ಕಚೇರಿಗೆ ಬರಬಾರದು ಎಂದು ಹೇಳಾಗಿದೆ. ಕೊರೊನಾ ಭೀತಿ ಹಿನ್ನೆಯಲ್ಲಿ ಕಚೇರಿ ಬಳಿ ಬರಬಾರದು ಎಂದು ಹೇಳಿದೆ.
ಆದರೆ ವಿಧಾನಪರಿಷತ್ ಚುನಾವಣೆ ಟಿಕೆಟ್ ಆಕಾಂಕ್ಷಿಗಳಿಗೆ ಢವ ಢವ ಶುರುವಾಗಿದೆ. ಇಂದು ನಡೆಯುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ವಿಧಾನಪರಿಷತ್ ಟಿಕೆಟ್ ಯಾರಿಗೆ ನೀಡಬೇಕು ಎಂಬ ಚರ್ಚೆ ನಡೆಯುವ ಸಾಧ್ಯತೆಯಿದೆ. 5 ಸ್ಥಾನಗಳನ್ನು ನಾಮ ನಿರ್ದೇಶನ ಮಾಡುವ ಬಲ ಬಿಜೆಪಿಗಿದೆ. ಇನ್ನೊಂದೆಡೆ 4 ಸ್ಥಾನಗಳಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಭಾರಿ ಪೈಪೋಟಿ ಇದೆ.
ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಶಾಕ್ ನೀಡಿತ್ತು. ಕಳೆದ ವಾರ ರಾಜ್ಯಸಭೆ ಚುನಾವಣೆ ಟಿಕೆಟ್ ಫೈನಲ್ ಮಾಡಲು ಕೋರ್ ಕಮಿಟಿ ಸಭೆ ಸೇರಿತ್ತು. ಅದರ ಪ್ರಕಾರ ಮೂರು ಹೆಸರುಗಳನ್ನು ಫೈನಲ್ ಮಾಡಿ, ಕೇಂದ್ರಕ್ಕೆ ಕಳಿಸಿತ್ತು. ಆದರೆ ಕೇಂದ್ರ ನಾಯಕತ್ವ ಅಚ್ಚರಿ ಮೂಡಿಸುವಂತ ಹೆಸರುಗಳನ್ನು ಘೋಷಣೆ ಮಾಡಿತ್ತು.
ಇದೀಗ ಅಂತಹ ನಿರ್ಧಾರವೇ ಮತ್ತೆ ಹೊರ ಬೀಳಲಿದೆ ಎಂಬ ಚರ್ಚೆಗಳು ಬಿಜೆಪಿ ಪಡಸಾಲೆಯಲ್ಲಿ ಚರ್ಚಿತವಾಗುತ್ತಿವೆ. ಇಂದು ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಹೆಸರುಗಳು ಫೈನಲ್ ಮಾಡಿ ಕೇಂದ್ರಕ್ಕೆ ಕಳಿಸಲಾಗುತ್ತದೆ. ಆದರೆ ಬಿಜೆಪಿ ಕೇಂದ್ರ ಸಮಿತಿ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಇನ್ನೊಂದೆಡೆ ರಾಜ್ಯಸಭೆ ಟಿಕೆಟ್ ಆಯ್ಕೆ ವಿಚಾರದಲ್ಲಿ ಮಾತ್ರ ಕೇಂದ್ರ ಸಮಿತಿ ನಿರ್ಧಾರ ತೆಗೆದುಕೊಂಡಿತ್ತು. ವಿಧಾನ ಪರಿಷತ್ ಚುನಾವಣೆ ಟಿಕೆಟ್ ಆಯ್ಕೆಯ ನಿರ್ಧಾರ ರಾಜ್ಯ ನಾಯಕತ್ವಕ್ಕೆ ಬಿಟ್ಟುಕೊಡುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ.
ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಗಳಿಗೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಜೊತೆಗೆ ವಿಧಾನ ಪರಿಷತ್ ಟಿಕೆಟ್ ಆಯ್ಕೆ ವಿಚಾರದಲ್ಲಿ ಬಿಜೆಪಿ ಸೆಂಟ್ರಲ್ ಕಮಿಟಿ ಯಾವ ನಡೆ ಅನುಸರಿಸುತ್ತದೆ ಎಂಬುದು ಕಾದು ನೋಡಬೇಕಿದೆ.








