ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಡಿಕೆಶಿ ಪುತ್ರಿ ಐಶ್ವರ್ಯ ಹಾಗೂ ಮಾಜಿ ಸಿಎಂ ಎಸ್.ಎಂ ಕೃಷ್ಣರ ಮೊಮ್ಮಗ ಅಮರ್ಥ್ಯ ಸುಬ್ರಮಣ್ಯ ಮದುವೆ ಮಾತುಕತೆ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಎಸ್.ಎಂ.ಕೆ ಕುಟುಂಬ ಭೇಟಿ ನೀಡಿದೆ. 
ಸಿದ್ಧಾರ್ಥ ಪುತ್ರ ಅಮರ್ಥ್ಯ ಸುಬ್ರಮಣ್ಯ, ಎಸ್.ಎಂ. ಕೃಷ್ಣ ದಂಪತಿ ಸೇರಿದಂತೆ ಕುಟುಂಬ ವರ್ಗ ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ ಕೊಟ್ಟಿದ್ದು, ಅವರನ್ನು ಡಿ.ಕೆ ಶಿವಕುಮಾರ್ ಬರಮಾಡಿಕೊಂಡಿದ್ದಾರೆ.
ಡಿಕೆಶಿ ಪುತ್ರಿ ಐಶ್ವರ್ಯ ಹಾಗೂ ಉದ್ಯಮಿ ಸಿದ್ದಾರ್ಥ್ ಪುತ್ರ ಅಮರ್ಥ್ಯ ಸುಬ್ರಮಣ್ಯ ವಿವಾಹ ಸಂಬಂಧ ಎರಡು ಕುಟುಂಬಗಳು ಮಾತುಕತೆ ನಡೆಸಿವೆ. ಆಷಾಢ ಕಳೆದ ನಂತರ ಆಗಸ್ಟ್ ತಿಂಗಳಲ್ಲಿ ನಿಶ್ಚಿತಾರ್ಥ ನಡೆಸುವ ಸಂಬಂಧ ಮಾತುಕತೆ ನಡೆದಿದೆ.ಬಹುತೇಕ ಡಿಸೆಂಬರ್ ನಲ್ಲಿ ಮದುವೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. ಇನ್ನು ಒಂದು ಗಂಟೆಯ ಕಾಲ ಮಾತುಕತೆ ನಡೆದಿದ್ದು, ತಾಂಬೂಲ ಬದಲಿಸಿಕೊಳ್ಳಲಾಗಿದೆ.
ಇದೇ ತಿಂಗಳ 12 ರಂದು ಡಿ.ಕೆ.ಶಿವಕುಮಾರ್ ಕುಟುಂಬ ಸದಾಶಿವನಗರದ ಎಸ್.ಎಂ.ಕೃಷ್ಣ ನಿವಾಸಕ್ಕೆ ತೆರಳಿ ತಾಂಬೂಲ ಶಾಸ್ತ್ರ ಕಾರ್ಯಕ್ರಮ ನೆರವೇರಿಸಿತ್ತು. ಆ ಮೂಲಕ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಎಸ್‌ಎಂಕೆ ಅಳಿಯ, ದಿವಂಗತ ಉದ್ಯಮಿ ಸಿದ್ಧಾರ್ಥ ಅವರ ಪುತ್ರ ಅಮರ್ಥ್ಯ ಅವರ ವಿವಾಹಕ್ಕೆ ಮುನ್ನುಡಿ ಬರೆಯಲಾಗಿತ್ತು.
ಇದರ ಮುಂದುವರಿದ ಭಾಗವಾಗಿ ಇವತ್ತು ಸದಾಶಿವನರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಎಸ್ ಎಂ ಕೆ ಕುಟುಂಬ ಹೆಣ್ಣು ನೋಡುವ ಶಾಸ್ತ್ರ ನೆರವೇರಿಸಿದೆ.








