ಬೆಂಗಳೂರು : ಕೊರೊನಾ ಸೋಂಕು ತಡೆಗಟ್ಟಲು ಮಾಸ್ಕ್ ಧರಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಿದೆ. ಹಾಗಾಗಿ ಇದೆ ಗುರುವಾರ ಮಾಸ್ಕ್ ಡೇ ಆಚರಿಸಲು ಸರ್ಕಾರ ತೀರ್ಮಾನ ಮಾಡಿದೆ.
ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಅಧಿಕಾರಗಳ ಸಭೆ ನಡೆಸಿದ ಸಿಎಂ ಬಿ.ಎಸ್. ಯಡಿಯೂರಪ್ಪ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅವರು, ಇದೆ ಗುರುವಾರ ಮಾಸ್ಕ್ ಡೇ ಆಚರಿಸಲಾಗುವುದು. ವಿಧಾನಸೌಧದಲ್ಲಿ ಬೆಳಿಗ್ಗೆ 8.30 ಕ್ಕೆ ಮಾಸ್ಕ್ ಧರಿಸಿ 1 ಕಿ,ಮೀ ವಾಕ್ ಮಾಡಲಾಗುತ್ತದೆ. ಇದು ವಿಧಾನಸೌಧದಲ್ಲಿ ಮಾತ್ರವಲ್ಲ ರಾಜ್ಯದ ಪಂಚಾಯತ್ ಮಟ್ಟದಲ್ಲಿ ಆಚರಿಸಲಾಗುತ್ತದೆ. ಕೊರೊನಾ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ ರಾಜ್ಯದ ಜನ ಆತಂಕದಲ್ಲಿ ಇದ್ದಾರೆ. ಹಾಗಾಗಿ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಜೊತೆ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.








