ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಗಳಿಗೆ ಕೊರೊನಾ ಸೋಂಕು
ಮುಂಬೈ, ಜೂನ್ 15: ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ) ನ ಎಂಟು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕೊರೊನಾ ಸೋಂಕಿತರು ಮಹಾರಾಷ್ಟ್ರದ ಮುಂಬೈ ಹಾಗೂ ಥಾಣೆಯ ಎಸ್.ಬಿ.ಐ ಶಾಖೆಯ ಸಿಬ್ಬಂದಿಗಳು. ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಮುಂಬೈನ ಎರಡು ಮತ್ತು ಥಾಣೆಯ ಒಂದು ಶಾಖೆಗಳನ್ನು ಮುಚ್ಚಲಾಗಿದೆ ಎಂದು ಎಸ್.ಬಿ.ಐ ತಿಳಿಸಿದೆ.
ಥಾಣೆಯಲ್ಲಿರುವ ಎಸ್.ಬಿ.ಐ ನ ಪ್ರಧಾನ ಶಾಖೆಯ 27 ಮಂದಿಯಲ್ಲಿ 6 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.
ವಾಯುವ್ಯ ಮುಂಬೈ ಉಪನಗರ ಜೋಗೇಶ್ವರಿ (ಪೂರ್ವ) ನಲ್ಲಿರುವ ಚೆಕ್ ಪ್ರೊಸೆಸಿಂಗ್ ಸೆಲ್ (ಎಲ್‌ಸಿಪಿಸಿ) ನಲ್ಲಿ ನಗದು ಅಧಿಕಾರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದರೆ, ಮುಂಬೈ ನ ಅಂಧೇರಿ ಪ್ರದೇಶದಲ್ಲಿರುವ ಎಲ್‌ಸಿಪಿಸಿಯಲ್ಲಿ ಗಾರ್ಡನ್ ಕೆಲಸ ಮಾಡುವ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಹಾಗಾಗಿ ಮುಂಬೈನ ಎರಡು ಮತ್ತು ಥಾಣೆಯ ಒಂದು ಶಾಖೆ ಸೇರಿದಂತೆ ಮೂರು ಶಾಖೆಗಳನ್ನು ಮುಚ್ಚಲಾಗಿದೆ ಎಂದು ಎಸ್.ಬಿ.ಐ ನ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ಎಸ್.ಬಿ.ಐ ನ ಜನರಲ್ ಮ್ಯಾನೇಜರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೊರೊನಾ ಸೋಂಕಿನ ಸಲುವಾಗಿ ಬ್ಯಾಂಕ್ ಗಳ ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಲು ತಂಡವನ್ನು ರಚಿಸಲಾಗಿದ್ದು, ಅದು ಇಡೀ ದೇಶದ ನಮ್ಮ ಬ್ಯಾಂಕುಗಳ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಎಂತಹ ಸಂದರ್ಭದಲ್ಲೂ ಕೊರೊನಾ ಸೋಂಕು ತಡೆಗಟ್ಟಲು ಸೂಕ್ತ ನಿಯಮಾವಳಿಗಳನ್ನು ಅನುಸರಿಸಲಾಗುತ್ತದೆ ಮತ್ತು ಕೊರೊನಾ ಸೋಂಕಿಗೆ ಒಳಗಾಗಿರುವ ನಮ್ಮ ಸಿಬ್ಬಂದಿ ಸದಸ್ಯರು ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.