ಬೆಂಗಳೂರು : ರಾಜ್ಯ ವಿಧಾನ ಪರಿಷತ್ ನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆ ದಿನಾಂಕ ನಿಗದಿಯಾಗಿದೆ. ನಾಮಪತ್ರ ಸಲ್ಲಿಸಲು ಜೂನ್ 18 ಕೊನೆಯ ದಿನವಾಗಿದೆ. ಈ ಹಿನ್ನೆಲೆ ಟಿಕೆಟ್ ಫೈನಲ್ ಮಾಡಲೆಂದು ಜೆಡಿಎಸ್ ಶಾಸಕಾಂಗ ಸಭೆ ಇಂದು ನಡೆದಿದೆ. ಜೆಡಿಎಸ್ ವರಿಷ್ಠ ಹೆಚ್.ಡಿ,ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಟಿಕೆಟ್ ಯಾರಿಗೆ ಎಂದು ಫೈನಲ್ ಮಾಡಲು ಆಗಿಲ್ಲ ಎನ್ನುವ ಮಾಹಿತಿ ಜೆಡಿಎಸ್ ಮೂಲಗಳಿಂದ ತಿಳಿದು ಬಂದಿದೆ.
ಏಳು ಸ್ಥಾನಗಳಲ್ಲಿ ಒಂದು ಸ್ಥಾನ ಮಾತ್ರ ಜೆಡಿಎಸ್ ಪಾಲಾಗಿದೆ. ಆದರೆ ಒಂದು ಸ್ಥಾನ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದ್ದರಿಂದು ಇಂದು ನಡೆದ ಜೆ.ಡಿ.ಎಲ್.ಪಿ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಒಮ್ಮತಕ್ಕೆ ಬರಲು ಆಗಿಲ್ಲ. ಜೊತೆಗೆ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಇನ್ನೊಂದು ಬಾರಿ ಅವಕಾಶ ನೀಡಿ ಎಂದು ಕೇಳುತ್ತಿದ್ದಾರೆ. ಅಲ್ಲದೆ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್, ಕೋನರೆಡ್ಡಿ ಮತ್ತು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ರಾಜಣ್ಣ ರೇಸ್ ನಲ್ಲಿ ಇದ್ದಾರೆ. ಹಾಗಾಗಿ ಇಂದು ನಡೆದ ಸಭೆಯಲ್ಲಿ ಅಂತಿಮ ಮಾಡಲು ಆಗಿಲ್ಲ.
ಆದರೆ ಜೆ. ಡಿ. ಎಲ್ ಪಿ. ಸಭೆಯಲ್ಲಿ ಪ್ರಾದೇಶಿಕತೆ, ಸಮುದಾಯ ಪ್ರಾತಿನಿಧ್ಯತೆ ಸೇರಿದಂತೆ ಬೇರೆ ಬೇರೆ ಆಯಾಮಗಳಲ್ಲಿ ಚರ್ಚೆ ಮಾಡಲಾಗಿದೆ. ಹಾಗಾಗಿ ಟಿಕೆಟ್ ಪೈನಲ್ ಮಾಡುವ ವಿಚಾರವನ್ನು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಅಂಗಳಕ್ಕೆ ಎಸೆಯಲಾಗಿದೆ. ಆದ್ದರಿಂದ ಶ್ರೀಘದಲ್ಲಿ ಹೆಚ್.ಡಿ.ದೇವೇಗೌಡರು ಅಂತಿಮ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.








