ಬಳ್ಳಾರಿ : ಲಾಕ್ ಡೌನ್ ನಿಯಮಗಳನ್ನು ಗಾಳಿಗೆ ತೂರಿ ಅದ್ಧೂರಿಯಾಗಿ ಮಗನ ಮದುವೆ ಮಾಡಿದ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಅವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ತಾಂಡಾದಲ್ಲಿ ಪರಮೇಶ್ವರ್ ನಾಯ್ಕ್ ಮಗನ ಮದುವೆ ನಡೆಯಿತು. ಈ ಮದುವೆಗೆ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ನಾಯಕರನ್ನು ಪಿಟಿಪಿ ಆಹ್ವಾನಿಸಿದ್ದರು. ಅವರ ಆಹ್ವಾನದ ಮೇರೆಗೆ ವಿವಾಹಕ್ಕೆ ಬಂದ ಸಿದ್ದರಾಮಯ್ಯ, ಕಾರಿಂದ ಇಳಿದ ಕೂಡಲೇ ಪರಮೇಶ್ವರ್ ನಾಯ್ಕ್ ಅವರನ್ನು ತರಾಟೆಗೆ ತೆಗೆದುಕೊಂಡರು. ಏನಯ್ಯಾ ಪಿಟಿಪಿ ಮಾಸ್ಕ್ ಹಾಕೊಂಡಿಲ್ಲ?. 50 ಜನಕ್ಕಿಂತ ಹೆಚ್ಚು ಸೇರಿಸಿದ್ದೀಯಾ, ಕೇಸ್ ಹಾಕಬೇಕು ನಿನ್ನ ಮೇಲೆ ಎಂದು ಸಿದ್ದರಾಮಯ್ಯ ಗರಂ ಆದರು.
ಇನ್ನು ಹರಪನಹಳ್ಳಿಯ ಲಕ್ಷ್ಮೀಪುರ ತಾಂಡಾದಲ್ಲಿ ಪರಮೇಶ್ವರ್ ನಾಯ್ಕ್ ಮಗನ ಮದುವೆ ನಡೆದಿದೆ. ಮದುವೆಯಲ್ಲಿ ಸಿದ್ದರಾಮಯ್ಯ, ಜಿ. ಪರಮೇಶ್ವರ್ ಹಾಗೂ ಶ್ರೀರಾಮುಲು ಸೇರಿದಂತೆ ಅನೇಕ ಮಂದಿ ಭಾಗಿಯಾಗಿದ್ದರು. ಆದ್ರೆ ಈ ಮದುವೆಯಲ್ಲಿ ಲಾಕ್ ಡೌನ್ ನಿಯಮಗಳಿಗೆ ತಿಲಾಂಜಲಿ ಹಾಡಲಾಗಿತ್ತು.
ಈ ಸಂಬಂಧ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಪಿಟಿಪಿ ವಿರುದ್ಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








