ಬೆಂಗಳೂರು: ರಾಜ್ಯ ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮ ತಗೆದುಕೊಂಡಿದೆ ಎಂದು ಹೇಳಿದರೂ ರಾಜ್ಯದಲ್ಲಿ ಮಹಾಮಾರಿ ಕೊರೊನಾ ಆರ್ಭಟ ಮುಂದುವರೆದಿದೆ.
ಇಂದು 213 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ ಸಾವಿನ ಸರಣಿ ಮುಂದುವರೆದಿದೆ. ಕಳೆದ ಒಂದು ವಾರದಿಂದ ಪ್ರತಿ ದಿನವೂ 1 ಅಥವಾ 2-3 ಮಂದಿ ಬೆಂಗಳೂರಿನಲ್ಲಿ ಕೊರೊನಾ ಹೆಮ್ಮಾರಿಗೆ ಉಸಿರು ಚೆಲ್ಲುತ್ತಿದ್ದಾರೆ.
ಇಂದೂ ಕೂಡ 75 ವರ್ಷದ ಮಹಿಳೆ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದು, ಬೆಂಗಳೂರಿನಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಧಾರವಾಡದಲ್ಲಿ ಸಾವಿನ ಸರಣಿ ಮುಂದುವರೆದಿದ್ದು, ಇಂದು 65 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಅತಿಹೆಚ್ಚು ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಇಂದು ಬೆಂಗಳೂರು 2ನೇ ಸ್ಥಾನಕ್ಕೆ ಜಿಗಿದಿದೆ. ಮೊದಲ ಸ್ಥಾನದಲ್ಲಿರುವ ಕಲಬುರಗಿಯಲ್ಲಿ 48 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದರೆ, ಬೆಂಗಳೂರು ನಗರದಲ್ಲಿ 35 ಪಾಸಿಟಿವ್ ಪ್ರಕರಣಗಳು ಕನ್ಫರ್ಮ್ ಆಗಿವೆ. ಧಾರವಾಡ 34, ದಕ್ಷಿಣ ಕನ್ನಡ 23, ರಾಯಚೂರು 18, ಯಾದಗಿರಿ 13, ಬೀದರ್ 11, ಬಳ್ಳಾರಿ 0, ಕೊಪ್ಪಳ ನಾಲ್ಕು ಪ್ರಕರಣಗಳು ದಾಖಲಾಗಿವೆ.








