ಕೊರೊನಾ ಪರೀಕ್ಷಾ ವರದಿಗೆ ಕಾಯದೇ ಮೃತದೇಹಗಳನ್ನು ಅವರ ಸಂಬಂಧಿಗಳಿಗೆ ಹಸ್ತಾಂತರಿಸಿ – ಅಮಿತ್ ಶಾ

ಹೊಸದಿಲ್ಲಿ, ಜೂನ್ 16 : ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿ ಆಸ್ಪತ್ರೆಗಳಿಗೆ ಯಾರಾದರೂ ಮೃತಪಟ್ಟರೆ ಕೊರೊನಾ ಪರೀಕ್ಷಾ ವರದಿಗೆ ಕಾಯದೇ ಕೂಡಲೇ ಮೃತದೇಹಗಳನ್ನು ಅವರ ಸಂಬಂಧಿಗಳಿಗೆ ಹಸ್ತಾಂತರಿಸುವಂತೆ ಸೂಚಿಸಿದ್ದಾರೆ.
ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿನ ಭೀತಿ ಹೆಚ್ಚಳವಾಗಿದ್ದು, ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ವ್ಯಾಪಕವಾಗಿ ಏರಿಕೆಯಾಗುತ್ತಿದೆ. ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು ಸೋಂಕು ಹತೋಟಿಗೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ದೆಹಲಿಯ ಆಸ್ಪತ್ರೆಗಳಲ್ಲಿ ರೋಗಿಗಳು ಮೃತಪಟ್ಟರೆ, ಕೊರೊನಾ ಸೋಂಕು ತಗುಲಿರಬಹುದೆಂದು ಶಂಕೆ ಇರುವ ವ್ಯಕ್ತಿಗಳ ಮೃತದೇಹವನ್ನು ಕೊರೊನಾ ಪರೀಕ್ಷಾ ವರದಿ ಬರುವ ವರೆಗೂ ಅವರ ಕುಟುಂಬಕ್ಕೆ ಹಸ್ತಾಂತರಿಸುತ್ತಿರಲಿಲ್ಲ. ಇದೀಗ ಗೃಹ ಸಚಿವ ಅಮಿತ್ ಶಾ ಅವರು ಕೊರೊನಾ ಪರೀಕ್ಷಾ ಫಲಿತಾಂಶ ಬರುವವರೆಗೂ ಕಾಯದೇ ಕೂಡಲೇ ಮೃತದೇಹಗಳನ್ನು ಅವರ ಸಂಬಂಧಿಗಳಿಗೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.








