ಬೆಂಗಳೂರು : ಕೊರೊನಾ ಸೋಂಕು ತಡೆಗಟ್ಟಲು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಆಗಾಗ ಸ್ಯಾನಿಟೈಸರ್ ಬಳಸಬೇಕು ಮತ್ತು ಮಾಸ್ಕ್ ಧರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಮಾಸ್ಕ್, ಪಿಪಿಇ, ಕೈ ಗವುಸುಗಳ ಬಳಕೆ ಹೆಚ್ಚಾಗಿದೆ. ಇದರಿಂದಾಗಿ ಕರ್ನಾಟಕ ರಾಜ್ಯದಲ್ಲಿ ಪ್ರತಿನಿತ್ಯ 3000 ಕೆಜಿಯಷ್ಟು ಕೊರೊನಾ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಕರ್ನಾಟಕದಲ್ಲಿ ದಿನಂಪ್ರತಿ 3000 ಕೆಜಿ ಯಷ್ಟು ಕೊರೊನ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಮಾಸ್ಕ್ ಪಿಪಿಇ ಕಿಟ್, ಕೈ ಗವುಸುಗಳ ಮೂಲಕ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ತ್ಯಾಜ್ಯದ ವಿಲೇವಾರಿ ವೈಜ್ಞಾನಿಕವಾಗಿ ಆಗಬೇಕು. ಆದರೆ ಕ್ಲಿಷ್ಟಕರವಾಗಿದೆ. ಈ ತ್ಯಾಜ್ಯ ಕಡಿಮೆ ಮಾಡಲು ಸಾರ್ವಜನಿಕರು ಮನೆಯಲ್ಲೇ ತಯಾರಿಸಿದ ಮರು ಬಳಕೆಯ ಮಾಸ್ಕ್ ಬಳಕೆಯನ್ನು ರೂಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಬೆಂಗಳೂರಂತ ಸಿಟಿಯಲ್ಲಿ ಕಸ ವಿಲೇವಾರಿ ಸಮಸ್ಯೆ ಬಿಗಡಾಯಿಸುವ ಲಕ್ಷಣಗಳು ಕಂಡು ಬರುತ್ತಿದೆ. ಹಾಗಾಗಿ ಬಿಬಿಎಂಪಿ ಸಹ ಕಸ ವಿಗಂಡಣೆ ಮಾಡದೆ ಕಸ ಹಾಕಿದರೆ ದಂಡ ಹಾಕಲು ತೀರ್ಮಾನಿಸಿ, ಆದೇಶ ಹೊರಡಿಸಿತ್ತು. ಇದರ ಜೊತೆಗೆ ಕೊರೊನಾ ನಿಯಂತ್ರಕ ವಸ್ತುಗಳಿಂದ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಕಡಿಮೆ ಮಾಡುವ ವಿಚಾರ ಸರ್ಕಾರ ಮತ್ತು ಬಿಬಿಎಂಪಿಗೆ ತಲೆನೋವಾಗಿದೆ.
ಕೊರೊನಾ ಸೋಂಕು ಸಧ್ಯಕೆ ಕಡಿಮೆ ಆಗುವ ಲಕ್ಷಣಗಳಿಲ್ಲ. ಎಲ್ಲಿಯವರೆಗೂ ಕೊರೊನಾ ಸೋಂಕು ಇರುತ್ತದೆಯೋ ಅಲ್ಲಿಯವರೆಗೂ ಮಾಸ್ಕ್, ಪಿಪಿಇ ಕಿಟ್ ಸೇರಿದಂತೆ ಇತರೆ ಕೊರೊನಾ ನಿಯಂತ್ರಕ ವಸ್ತುಗಳನ್ನು ಬಳಸಬೇಕು. ಇದರಿಂದ ಸರ್ಕಾರಕ್ಕೆ ತ್ಯಾಜ್ಯ ಕಡಿಮೆ ಮಾಡುವ ವಿಚಾರ ತಲೆನೋವಾಗಿದೆ. ಹಾಗಾಗಿ ಈ ತ್ಯಾಜ್ಯ ಕಡಿಮೆ ಮಾಡಲು ಸಾರ್ವಜನಿಕರು ಮನೆಯಲ್ಲೇ ತಯಾರಿಸಿದ ಮರು ಬಳಕೆಯ ಮಾಸ್ಕ್ ಬಳಕೆಯನ್ನು ರೂಡಿಸಿಕೊಳ್ಳಬೇಕು ಎಂದು ಸರ್ಕಾರ ಮನವಿ ಮಾಡಿದೆ.








