ಭಾರತ ಕ್ರಿಕೆಟ್ ತಂಡವು ಇದೇ ದಿನ ಬರೋಬ್ಬರಿ 12 ವರ್ಷಗಳ ಹಿಂದೆ ಇತಿಹಾಸ ಸೃಷ್ಟಿ ವಿಶ್ವಕಪ್ ಗೆ ಮುತ್ತಿಕ್ಕಿತ್ತು. ಸದ್ಯ ಇದನ್ನು ಭಾರತೀಯರು ನೆನಪಿಸಿಕೊಂಡು ಪುಳಕಿತರಾಗುತ್ತಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ್ದ ಭಾರತ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಸಂಭ್ರಮಿಸಿತ್ತು. ಮಹೇಂದ್ರ ಸಿಂಗ್ ಧೋನಿ ಸಿಕ್ಸ್ ಸಿಡಿಸುವ ಮೂಲಕ ಐತಿಹಾಸಿಕ ಗೆಲುವಿನ ರೂವಾರಿಯಾಗಿದ್ದರು.
ಈ ವಿಶ್ವಕಪ್ ಗೆಲುವಿಗೆ 12 ವರ್ಷಗಳ ತುಂಬಿದ ಸಂದರ್ಭದಲ್ಲಿ ಐಸಿಸಿ ವಿಶೇಷ ವಿಡಿಯೋವನ್ನು ಬಿಡುಗಡೆ ಮಾಡಿದೆ. ಅಲ್ಲದೆ 2023ರಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ ಲೋಗೋ ಕೂಡ ಬಿಡುಗಡೆಯಾಗಿದೆ. ಪ್ರಸಕ್ತ ವಿಶ್ವಕಪ್ ಆರಂಭವಾಗಲು ಇನ್ನೂ 6 ತಿಂಗಳು ಬಾಕಿ ಉಳಿದಿವೆ. ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ 10 ತಂಡಗಳು 48 ದಿನಗಳ ಕಾಲ ಪ್ರತಿಷ್ಠಿತ ಟೂರ್ನಿಯಲ್ಲಿ ಸೆಣೆಸಲಿವೆ.
2011ರ ಏಕದಿನ ವಿಶ್ವಕಪ್ ಗೆಲ್ಲುವುದು ಭಾರತಕ್ಕೆ ಮುಖ್ಯವಾಗಿತ್ತು. ಸಚಿನ್ ತೆಂಡೂಲ್ಕರ್ 7ನೇ ವಿಶ್ವಕಪ್‌ನಲ್ಲಿ ಆಡುತ್ತಿದ್ದರೂ, ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಎಂಎಸ್ ಧೋನಿ ನೇತೃತ್ವದ ಭಾರತ ತಂಡಕ್ಕೆ ತವರಿನಲ್ಲಿ ವಿಶ್ವಕಪ್ ನಡೆಯುತ್ತಿರುವುದು ಉತ್ತಮ ಅವಕಾಶವಾಗಿತ್ತು.








