ಹೈದರಾಬಾದ್ : ರಾಜಸ್ಥಾನ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆದ ಮೊದಲ ಪಂದ್ಯದಲ್ಲಿ ಜೋಸ್ ಬಟ್ಲರ್, ಯಶಸ್ವೀ ಜೈಸ್ವಾಲ್ ಹಾಗೂ ಸಂಜು ಸ್ಯಾಮ್ಸನ್ ಸಿಡಿಲಬ್ಬರದ ಅರ್ಧಶತಕ ಹಾಗೂ ಯಜುವೇಂದ್ರ ಚಾಹಲ್ ಸ್ಪಿನ್ ದಾಳಿಗೆ ರಾಜಸ್ಥಾನ್ 72 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ ಗಳಿಸಿತ್ತು. 204 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಹೈದರಾಬಾದ್ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಪರಿಣಾಮ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ ಹೀನಾಯ ಸೋಲನುಭವಿಸಿತು.
ಹೈದರಾಬಾದ್ ತಂಡದ ಬೌಲರ್ ಗಳು ಹಾಗೂ ಬ್ಯಾಟ್ಸಮನ್ ಗಳು ಸಾಮೂಹಿಕವಾಗಿ ಕಳಪೆ ಪ್ರದರ್ಶನ ತೋರಿದರು. ಚೇಸಿಂಗ್ ಆರಂಭಿಸಿದ ಹೈದರಾಬಾದ್ ಆರಂಭದಲ್ಲೇ ಅಗ್ರಕ್ರಮಾಂಕದ ಬ್ಯಾಟರ್‌ಗಳನ್ನು ಕಳೆದುಕೊಂಡಿತು. ಮಯಾಂಕ್ ಅಗರ್ವಾಲ್ 23 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 27 ರನ್ ಗಳಿಸಿದರೆ, ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಹ್ರಾರಿ ಬ್ರೂಕ್ (Harry Brook) 21 ಎಸೆತಗಳಲ್ಲಿ ಕೇವಲ 1 ಬೌಂಡರಿಯೊಂದಿಗೆ 13 ರನ್ ಗಳಿಸಿ ಔಟಾದರು. ಇದರಿಂದ ಪವರ್ ಪ್ಲೇ ಮುಗಿಯುವಷ್ಟರಲ್ಲೇ ಹೈದರಾಬಾದ್ ಕೇವಲ 30 ರನ್ ಗಳಿಸಿ 2 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ನಂತರ ಕಣಕ್ಕಿಳಿದವರು ರಾಜಸ್ಥಾನ್ ಬೌಲರ್‌ಗಳ ದಾಳಿಗೆ ದಂಗಾದರು. ಆದಿಲ್ ರಶೀದ್ 18 ರನ್, ಗ್ಲೇನ್ ಫಿಲಿಪ್ಸ್ 8 ರನ್, ನಾಯಕ ಭುವನೇಶ್ವರ್ ಕುಮಾರ್ 6 ರನ್, ವಾಷಿಂಗ್ಟನ್ ಸುಂದರ್ 1 ರನ್ ಗಳಿಸಿದರೆ, ಆರಂಭಿಕ ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಇದರಿಂದ ತಂಡವು 100 ರನ್‌ಗಳ ಗಡಿ ತಲುಪುವುದೇ ಕಷ್ಟವಾಗಿತ್ತು. ಆದರೆ ಕೊನೆಯಲ್ಲಿ ಉಮ್ರಾನ್ ಮಲಿಕ್, ಅಬ್ದುಲ್ ಸಮದ್ ಸಿಕ್ಸರ್, ಬೌಂಡರಿ ಚಚ್ಚಿ ತಂಡದ ಮೊತ್ತ 130ರ ಗಡಿ ದಾಟಿಸಿದರು. ಸಮದ್ 32 ರನ್ ಗಳಿಸಿದರೆ, ಮಲಿಕ್ ಕೇವಲ 8 ಎಸೆತಗಳಲ್ಲಿ 19 ರನ್ ಗಳಿಸಿ ತಂಡಕ್ಕೆ ನೆರವಾದರು.








