ಜಕಾರ್ತ: ಡೆಡ್ಲಿ ಮೀನು ಸೇವಿಸಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆಯೊಂದು ಮಲೇಷ್ಯಾದಲ್ಲಿ ನಡೆದಿದೆ.
ಪಫರ್’ ಹೆಸರಿನ ಡೆಡ್ಲಿ ಮೀನನ್ನು ಈ ದಂಪತಿ ಸೇವಿಸಿದ್ದರು ಎನ್ನಲಾಗಿದೆ. ಮಲೇಷ್ಯಾದ ಜೊಹೋರ್ ನಿವಾಸಿ ಲಿಮ್ ಸಿವ್ ಗುವಾನ್ (83) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಆಕೆಯ ಪತಿ ಕೋಮಾ ಸ್ಥಿತಿಯಲ್ಲಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯ ಅಂಗಡಿಯಲ್ಲಿ ಪಫರ್ ಎಂಬ ಮೀನನ್ನು ಈ ದಂಪತಿ ತಂದು, ಅಡುಗೆ ಮಾಡಿ, ಸೇವಿದ್ದರು ಎನ್ನಲಾಗಿದೆ.
ನನ್ನ ತಂದೆ-ತಾಯಿ ಹಲವು ವರ್ಷಗಳಿಂದ ಅದೇ ಮೀನು ವ್ಯಾಪಾರಿಯಿಂದ ಮೀನು ಖರೀದಿಸುತ್ತಿದ್ದಾರೆ. ಆದ್ದರಿಂದ ನನ್ನ ತಂದೆ ಆ ಮೀನಿನ ಬಗ್ಗೆ ಅಷ್ಟೇನು ಯೋಚಿಸಲಿಲ್ಲ ಎಂದು ಲಿಮ್ ದಂಪತಿ ಪುತ್ರಿ ಪ್ರತಿಕ್ರಿಯೆ ನೀಡಿದ್ದಾರೆ.
ಆಹಾರ ವಿಷಪೂರಿತವಾಗಿರುವ ಹಿನ್ನೆಲೆಯಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ. ಹೃದಯ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಈ ಘಟನೆ ನಡೆದಿದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಆ ದಿನಾಂಕದಂದು ಮಾರಾಟವಾದ ಎಲ್ಲ ಜಾತಿಯ ಮೀನುಗಳನ್ನು ಜಿಲ್ಲಾ ಆರೋಗ್ಯ ಕಚೇರಿ (ಪಿಡಿಕೆ) ವಿಶ್ಲೇಷಣೆಗಾಗಿ ತೆಗೆದುಕೊಂಡು ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿದೆ.
ಪಫರ್ ಮೀನಿನಲ್ಲಿ ಮಾರಣಾಂತಿಕ ವಿಷಕಾರಿ ಟೆಟ್ರೋಡೋಟಾಕ್ಸಿನ್ ಮತ್ತು ಸ್ಯಾಕ್ಸಿಟಾಕ್ಸಿನ್ ಅಂಶ ಇದೆ. ಈ ಅಂಶವನ್ನು ಅಡುಗೆ ಅಥವಾ ಘನೀಕರಿಸುವ ಮೂಲಕ ನಾಶಪಡಿಸಲಾಗುವುದಿಲ್ಲ. ಮೀನಿನಿಂದ ಈ ವಿಷವನ್ನು ಹೇಗೆ ತೆಗೆದುಹಾಕಬೇಕು ಎಂಬ ಕುರಿತು ತರಬೇತಿ ಪಡೆದಿರುವ ಅರ್ಹ ಬಾಣಸಿಗರಿಗೆ ಮಾತ್ರ ಮೀನು ಆಹಾರ ತಯಾರಿಸಲು ಅನುಮತಿ ನೀಡಲಾಗಿದೆ ಎಂದು ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ.








