ಉಡುಪಿ : ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಬಿಜೆಪಿ ಮಧ್ಯೆ ಜಟಾಪಟಿ ಶುರುವಾಗಿದೆ. ಚುನಾವಣೆ ಸಂದರ್ಭದಲ್ಲಿ ಮುತಾಲಿಕ್ ಬಿಜೆಪಿ ಹಾಗೂ ಕಾರ್ಕಳ ವಿಧಾನಸಸಭಾ ಕ್ಷೇತ್ರದ ಶಾಸಕ ಸುನೀಲ್ ಕುಮಾರ್ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಆದರೆ, ಅದಕ್ಕೆ ಬಿಜೆಪಿ ತಿರುಗೇಟು ನೀಡಿರಲಿಲ್ಲ. ಸದ್ಯ ಸುನೀಲ್ ಕುಮಾರ್ ಗೆ ಮತ್ತೊಮ್ಮೆ ಮತ ಹಾಕಿ ಮುಟ್ಟಾಳರಾಗಬೇಡಿ ಎಂದು ಪೋಸ್ಟ್ ಹಾಕಿದ್ದು, ಬಿಜೆಪಿ ತಿರುಗಿ ಬಿದ್ದಿದೆ.
ಕಾರ್ಕಳದ ಜನರು ಮತ್ತೊಮ್ಮೆ ಸುನಿಲ್ ಕುಮಾರ್ ಅವರನ್ನು ಗೆಲ್ಲಿಸಿದರೆ ನಿಮ್ಮಷ್ಟು ಮುಟ್ಟಾಳರು ಮತ್ತೊಬ್ಬರಿಲ್ಲ. ನೀವು ಮತ್ತೆ ಮುಟ್ಟಾಳರಾಗುವಿರಾ? ಎಂದು ಪ್ರಮೋದ್ ಮುತಾಲಿಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಾಕುತ್ತಿದ್ದಂತೆ ಕಾರ್ಕಳದ ಬಿಜೆಪಿ ಕಾರ್ಯಕರ್ತರು ಕೆರಳಿ ಕೆಂಡಾಮಂಡಲವಾಗಿದ್ದಾರೆ. ನೂರಾರು ಜನ ಮುತಾಲಿಕ್ ಪೋಸ್ಟರ್ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಕಳ ಮತದಾರರಿಗೆ ಅವಮಾನವಾಯ್ತು. ಇದರ ಫಲ ನೀವು ಫಲಿತಾಂಶದ ದಿನ ಅನುಭವಿಸ್ತೀರಿ. ಯಾರದ್ದೊ ಕುಮ್ಮಕ್ಕಿನಿಂದ ಯಾರದ್ದೋ ದುಡ್ಡು ತೆಗೆದುಕೊಂಡು ಎಲ್ಲಿಂದಲೋ ಕಾರ್ಕಳಕ್ಕೆ ಬಂದಿದ್ದೀರಿ. ಈ ಬಾರಿ ಕಾರ್ಕಳದಲ್ಲಿ ನಿಮಗೆ ಸರಿಯಾಗಿ ಬುದ್ಧಿ ಕಲಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ಈ ಪೋಸ್ಟರ್ ಶ್ರೀರಾಮ ಸೇನೆ- ಮುತಾಲಿಕ್ ಅಭಿಮಾನಿ ಬಳಗ- ಬಿಜೆಪಿ ಕಾರ್ಯಕರ್ತರು- ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ನಡುವಿನ ಹಗ್ಗಾಜಗ್ಗಾಟಕ್ಕೆ ಕಾರಣವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಮೋದ್ ಮುತಾಲಿಕ್ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದು, ಬಿಜೆಪಿ ನಾಯಕರು ಮುತಾಲಿಕ್ ಗೆ ಸವಾಲ್ ಹಾಕಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣಾ ಕಣ ಈಗ ಎಲ್ಲೆಡೆ ರಂಗೇರುತ್ತಿದೆ. ರಾಜಕೀಯ ಪಕ್ಷಗಳ ನಾಯಕರ ಮಾತಿನ ಸಮರ ಜೋರಾಗುತ್ತಿದೆ. ಇದರ ನಡುವೆ ಕಾರ್ಕಳದಲ್ಲಿ ಪೋಸ್ಟ್ ವಾರ್ ಶುರುವಾಗಿದೆ.








