ಚಿಕ್ಕಬಳ್ಳಾಪುರ : ಬೇಸಿಗೆಯ ಸೆಖೆಯ ಹಿನ್ನೆಲೆಯಲ್ಲಿ ಕುಟುಂಬವೊಂದು ಮನೆಯ ಮಹಡಿಯ ಮೇಲೆ ಮಲಗಿತ್ತು. ಇದೇ ಸಮಯಕ್ಕೆ ಹೊಂಚು ಹಾಕಿದ್ದ ಖದೀಮರು, ಮನೆಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ದೋಚಿ ಪರಾರಿಯಾಗಿದ್ದಾರೆ.
ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಇಸ್ಲಾಂ ನಗರದಲ್ಲಿ ಈ ಘಟನೆ ನಡೆದಿದೆ. ತೋಟದಲ್ಲಿ ಸೀನಪ್ಪ ಎಂಬವರು ಮನೆಯನ್ನ ಕಟ್ಟಿಕೊಂಡಿದ್ದು, ಕಳೆದ ಕೆಲವು ವರ್ಷಗಳಿಂದ ಅಲ್ಲಿಯೇ ವಾಸಿಸುತ್ತಿದ್ದಾರೆ. ಜೊತೆಗೆ ಪ್ರತಿ ಬಾರಿ ಬೇಸಿಗೆ ಕಾಲದಲ್ಲಿ ಮನೆಗೆ ಬೀಗ ಹಾಕಿ ಮಹಡಿ ಮೇಲೆ ಮಲಗುವುದು ಈ ಕುಟುಂಬಕ್ಕೆ ರೂಢಿಯಾಗಿದೆ. ಅದೇ ರೀತಿ ಶನಿವಾರ ಕೂಡ ಮನೆಗೆ ಬೀಗ ಹಾಕಿ ಮಹಡಿ ಮೇಲೆ ಮಲಗಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಖದೀಮರು, ಮನೆಯ ಬಾಗಿಲು ಮುರಿದು ಒಳ ನುಗ್ಗಿ ಚಿನ್ನಾಭರಣ ಹಾಗೂ ಹಣ ದೋಚಿ ಪರಾರಿಯಾಗಿದ್ದಾರೆ.
ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ ನೂರು ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ಹಾಗೂ ನಗದು ಸೇರಿದಂತೆ 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಮಾಲೀಕರು ಮಹಡಿ ಮೇಲೆ ಇರುವಾಗಲೆ ಕಳ್ಳರು ರಾಜಾರೋಷವಾಗಿ ಮನೆ ಕಳ್ಳತನ ಮಾಡಿರುವುದು ಕುಟುಂಬಸ್ಥರು ಸೇರಿದಂತೆ ಪಟ್ಟಣದ ಜನರನ್ನ ಬೆಚ್ಚಿ ಬೀಳಿಸಿದೆ. ಮೇಲ್ನೋಟಕ್ಕೆ ಗಮನಿಸಿದರೆ, ಈ ಬಗ್ಗೆ ಗೊತ್ತಿದ್ದವರೇ ಈ ಕೃತ್ಯ ಎಸಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಕುರಿತು ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.








