ಬೆಂಗಳೂರು : ಆರ್ ಸಿಬಿ ನಮ್ಮ ಹೆಮ್ಮೆಯ ತಂಡ. ಒಂದಿಲ್ಲ ಒಂದು ದಿನ ಕಪ್ ಗೆಲ್ಲುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಸದ್ಯ ಚುನಾವಣೆ ಘೋಷಣೆಯಾಗಿದೆ. ಹೀಗಾಗಿ ಭರ್ಜರಿ ಪ್ರಚಾರ ಕೂಡ ನಡೆದಿದೆ. ಇದರ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಒತ್ತಡದ ನಡುವೆಯೂ ಭಾನುವಾರ ಐಪಿಎಲ್ ಮ್ಯಾಚ್ ವೀಕ್ಷಿಸಿ ಕಾಲ ಕಳೆದಿದ್ದಾರೆ.
16ನೇ ಆವೃತ್ತಿಯ ಐಪಿಎಲ್ ಆರಂಭಗೊಂಡಿದ್ದು, ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆದಿತ್ತು. ಕ್ರೀಡಾಂಗಣದ ತುಂಬಾ ಲಕ್ಷಾಂತರ ಅಭಿಮಾನಿಗಳು ನೆರೆದಿದ್ದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಆಪ್ತರೊಂದಿಗೆ ತೆರಳಿ ಪಂದ್ಯ ವೀಕ್ಷಣೆ ಮಾಡಿದ್ದಾರೆ.
ಪಂದ್ಯ ವೀಕ್ಷಣೆಯ ನಂತರ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿರುವ ಅವರು, ಕ್ರಿಕೆಟ್ ನನ್ನ ಇಷ್ಟದ ಆಟ, ಆರ್ಸಿಬಿ ನನ್ನ ಹೆಮ್ಮೆಯ ತಂಡ. ನನ್ನಂತಹ ಕೋಟ್ಯಂತರ ಅಭಿಮಾನಿಗಳ ಹಾರೈಕೆ ಆರ್ಸಿಬಿ ಹುಡುಗರ ಜೊತೆಗಿದೆ. ಇಂದಲ್ಲ ನಾಳೆ ನಮ್ಮವರೂ ಕಪ್ ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ. ಓರ್ವ ಕನ್ನಡಿಗನಾಗಿ ನನ್ನ ಬೆಂಬಲ ಯಾವಾಗಲೂ ನಮ್ಮ ಆರ್ಸಿಬಿಗೆ ಎಂದು ಬರೆದಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಆರ್ ಸಿಬಿ ಕೇವಲ 16.2 ಓವರ್ ಗಳಲ್ಲಿ 172 ರನ್ ಹೊಡೆದು ಗೆಲುವಿನ ನಗೆ ಬೀರಿದೆ.








