ಕಾರವಾರ : ವಿಶ್ವೇಶ್ವರ ಹೆಗ್ಗಡೆ ಕಾಗೇರಿ(Vishweshwar Hegde Kageri) ಅವರಿಗೆ ಎದುರಾಳಿಯಾಗಿ ಸ್ಪರ್ಧಿಸುತ್ತಿದ್ದ ದಿ. ರಾಮಕೃಷ್ಣ ಹೆಗಡೆ ಅವರ ಮೊಮ್ಮಗ ಶಶಿಭೂಷಣ್ ಹೆಗಡೆ (Shashibhushan Hegde) ಜೆಡಿಎಸ್ ತೊರೆದು ಬಿಜೆಪಿ (BJP) ಸೇರಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (NalinKumar Kateel) ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. ಶಶಿಭೂಷಣ್ ಕುಮಟಾ ಕ್ಷೇತ್ರದಲ್ಲಿ ಎರಡು ಬಾರಿ ವಿಧಾನಸಭೆಗೆ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು. 2018 ರಲ್ಲಿ ಶಿರಸಿ ಕ್ಷೇತ್ರದಲ್ಲಿ ಸ್ಪರ್ಧಿಸಿ 26,625 ಮತಗಳನ್ನ ಪಡೆದು 3ನೇ ಸ್ಥಾನದಲ್ಲಿದ್ದರು. 2004 ರಲ್ಲಿ ಕುಮಟಾದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 31,273 ಮತ ಪಡೆದು ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಕೆ.ಶಟ್ಟಿ ವಿರುದ್ಧ 3,465 ಮತಗಳ ಅಂತರದಿಂದ ಸೋತಿದ್ದರು. 2008 ರಲ್ಲಿ ಅದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 30,201 ಮತ ಪಡೆದು ಅಂದಿನ ಜೆಡಿಎಸ್ ಅಭ್ಯರ್ಥಿ ದಿನಕರ್ ಶಟ್ಟಿ ವಿರುದ್ಧ 591 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು.
ಮೂರು ಸೋಲಿನ ನಂತರ ಜೆಡಿಎಸ್ ನಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡು ಶಿರಸಿ ಕ್ಷೇತ್ರದಲ್ಲಿ ತಮ್ಮ ಹಿಡಿತ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದರು. ಆದರೆ, ಈ ಬಾರಿ ಸ್ಪರ್ಧಿಸುವ ಅವಕಾಶ ಇದ್ದರೂ ಅವರು ಜೆಡಿಎಸ್ ನಿಂದ ಹಿಂದೆ ಸರಿದಿದ್ದಾರೆ. ಇವರನ್ನು ಸೆಳೆಯಲು ಕಾಂಗ್ರೆಸ್ ಕೂಡ ಪ್ರಯತ್ನಿಸಿತ್ತು. ಆದರೆ, ಅವರು ಮತ್ತೆ ಬಿಜೆಪಿ ಸೇರಿದ್ದಾರೆ.
ಶಶಿಭೂಷಣ್ ಹೆಗಡೆ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಸಂಸದ ಸ್ಥಾನಕ್ಕೆ ಅನಂತ್ ಕುಮಾರ್ ಹೆಗಡೆ ಸ್ಪರ್ಧಿಸದಿದ್ದರೇ ಆ ಸ್ಥಾನಕ್ಕೆ ಶಶಿ ಕಣಕ್ಕೆ ಇಳಿಯಬಹುದು.








