ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ (PSI recruiment scam) ಪ್ರಕರಣದ ಕಿಂಗ್ಪಿನ್ ಆಗಿರುವ ಆರ್.ಡಿ. ಪಾಟೀಲ್ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದಾನೆ ಎನ್ನಲಾಗಿದೆ.
ಅಫಜಲಪುರ (Afzalpur) ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಎಲ್ಲ ರೀತಿಯ ತಯಾರಿ ನಡೆಸಿದ್ದಾನೆ ಎನ್ನಲಾಗಿದೆ. ಆರ್.ಡಿ.ಪಾಟೀಲ್, ಪಕ್ಷೇತರನಾಗಿ ಸ್ಪರ್ಧಿಸುತ್ತೇನೆಂದು ತನ್ನ ಸಹಚರರಿಗೆ ತಿಳಿಸಿದ್ದ. ಆದರೆ, ಸದ್ಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ (KRPP) ಸ್ಪರ್ಧಿಸಲು ಮುಂದಾಗಿದ್ದಾನೆ ಎನ್ನಲಾಗಿದೆ.
ಏ.10 ರಂದು ಅಫಜಲಪುರಕ್ಕೆ ಆಗಮಿಸುತ್ತಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಅವರ ನೇತೃತ್ವದಲ್ಲಿ ಆರ್.ಡಿ ಪಾಟೀಲ್ ಸಹೋದರ ಮಹಾಂತೇಶ್ ಪಾಟೀಲ್ ಸೇರಿದಂತೆ ಬೆಂಬಲಿಗರು ಕೆಆರ್ಪಿಪಿಗೆ ಸೇರಲು ಸಿದ್ಧತೆ ನಡೆಸಿದ್ದಾರೆ. ಕಲಬುರಗಿ ಜೈಲಿನಲ್ಲಿರುವ ಆರ್.ಡಿ ಪಾಟೀಲ್ ಪರ ಆತನ ಸಹೋದರ ಮಹಾಂತೇಶ್ ಪಾಟೀಲ್ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸಿದ್ದಾನೆ.








