ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಸೇರಿದಂತೆ ಅಧಿಕಾರಿಗಳು ಎಲ್ಲೆಡೆ ಹದ್ದಿನ ಕಣ್ಣು ಇಟ್ಟಿದ್ದಾರೆ. ಸೂಕ್ತ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿರುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ಜಿಲ್ಲೆಯ ನಂದಗಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಸುಮಾರು 53.33 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. 21,25,304 ರೂ. ಮೌಲ್ಯದ 395.7 ಗ್ರಾಂ ಚಿನ್ನ ಹಾಗೂ 19,08,420 ರೂ ಮೌಲ್ಯದ 28.065 ಕೆಜಿ ಬೆಳ್ಳಿ ಜಪ್ತಿ ಮಾಡಿದ್ದಾರೆ. ಹಳಿಯಾಳದಿಂದ ಕಕ್ಕೇರಿಗೆ ಯಾವುದೇ ಬಿಲ್ ಇಲ್ಲದೆ ಕಾರಿನಲ್ಲಿ ಈ ಆಭರಣಗಳನ್ನು ಸಾಗಿಸಲಾಗುತ್ತಿತ್ತು. ಘಟನೆಯಲ್ಲಿ 13 ಲಕ್ಷ ರೂ. ಮೌಲ್ಯದ ಕಾರು ಸೇರಿದಂತೆ 53,33,724 ರೂ. ಮೌಲ್ಯದ ವಸ್ತುಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಳಿತಾಳ ಮೂಲದ ಧರ್ಮರಾಜ್ ಕುಟ್ರೆಯನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಪೊಲೀಸರ ಮತ್ತೊಂದು ಕಾರ್ಯಾಚರಣೆಯಲ್ಲಿ ಖಾಸಗಿ ಬಸ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಎರಡು ಕೋಟಿ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ. ಮುಂಬೈಯಿಂದ ಬೆಳಗಾವಿ ಮಾರ್ಗವಾಗಿ ಮಂಗಳೂರಿಗೆ ಹೊರಟಿದ್ದ ಬಸ್ ಮೇಲೆ ದಾಳಿ ನಡೆಸಿದ ಪೊಲೀಸರು, ಹಿರೇಬಾಗೇವಾಡಿ ಟೋಲ್ ಸಮೀಪ ದಾಳಿ ಮಾಡಿ 2 ಸಾವಿರ ಮುಖ ಬೆಲೆಯ ಕಂತೆ ಕಂತೆ ಹಣ ಪತ್ತೆ ಮಾಡಿದ್ದಾರೆ. ಸ್ಥಳಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಆದಾಯ ತೆರಿಗೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.








