ಮೈಸೂರು : ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಹೃದಯಾಘಾತಕ್ಕೆ ಬಲಿಯಾಗಿದ್ದ ಕಾಂಗ್ರೆಸ್ ಮುಖಂಡ ಆರ್. ಧ್ರುವನಾರಾಯಣ ಅವರ ಪತ್ನಿ ಕೂಡ ಇನ್ನಿಲ್ಲ.
ವೀಣಾ ಧ್ರುವನಾರಾಯಣ(Veena Dhruvanarayana) ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಅಲ್ಲದೇ, ಇತ್ತೀಚೆಗಷ್ಟೇ ಪತಿ ಆರ್ ಧ್ರುವನಾರಾಯಣ (R Dhruvanarayana) ಅವರು ನಿಧನರಾಗಿದ್ದಕ್ಕೆ, ಮಾನಸಿಕವಾಗಿ ಕುಗ್ಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ವೀಣಾ ಧ್ರುವನಾರಾಯಣ (54) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾವನ್ನಪ್ಪಿದ್ದಾರೆ.
ಮಾಜಿ ಸಂಸದ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧ್ರುವನಾರಾಯಣ ಮಾರ್ಚ್ 11 ರಂದು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ದರ್ಶನ್ (Darshan) ಹಾಗೂ ಮತ್ತೊಬ್ಬ ಮಗನನ್ನು ವೀಣಾ ಅಗಲಿದ್ದಾರೆ. ಇಂದು ವೀಣಾ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.








