ಮಡಿಕೇರಿ : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಪಕ್ಷಗಳಲ್ಲಿ ಟಿಕೆಟ್ ಗಾಗಿ ಪೈಪೋಟಿ ನಡೆಯುತ್ತಿದೆ. ಬಿಜೆಪಿ (BJP) ಪಾಳಯದಲ್ಲಿ ಟಿಕೆಟ್ ಗಾಗಿ ಪೈಪೋಟಿ ನಡೆಯುತ್ತಿದೆ. ಟಿಕೆಟ್ ಹಲವರು ಹಲವಾರು ತಂತ್ರ – ಪ್ರತಿತಂತ್ರ ಉಪಯೋಗಿಸುತ್ತಿದ್ದಾರೆ. ಮಡಿಕೇರಿ (Madikeri) ಕ್ಷೇತ್ರದ ಪ್ರಬಲ ಆಕಾಂಕ್ಷಿಯೊಬ್ಬರು ಸದ್ಯ ದೈವದ ಮೊರೆ ಹೋಗಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿ ಅಗಿರುವ ಬಿ.ಬಿ ಭರತೀಶ್(B.B. Bharatesh) ಮಡಿಕೇರಿ ನಗರದ ಮುತ್ತಪ್ಪನ್ ದೇವಾಲಯದ ಆವರಣದಲ್ಲಿ ನಡೆಯುತ್ತಿರುವ ದೈವಾರಾಧಾನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಒಂಭತ್ತು ಕೋಲಗಳ ಅರಾಧನೆ ನಡೆಯುವ ಸಂದರ್ಭದಲ್ಲಿ ಭರತೀಶ್ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ. ತಮಗೆ ಟಿಕೆಟ್ ದೊರೆಯುವಂತೆ ಹಾಗೂ ಮಡಿಕೇರಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಮುತ್ತಪ್ಪನ್ ದೇವಾಲಯಕ್ಕೆ ಆಗಮಿಸಿದ್ದೇನೆ. ದೇವರ ಬಳಿ ಇಷ್ಟಾರ್ಥ ಈಡೇರುವಂತೆ, ಕೊಡಗಿನಲ್ಲಿ (Kodagu) ಪ್ರಕೃತಿ ವಿಕೋಪಗಳು ನಡೆಯದೆ ಇರಲಿ ಹಾಗೂ ನಾಡು ಸಮೃದ್ಧಿಯಿಂದ ಇರುವಂತೆ ಪೂಜೆ ಸಲ್ಲಿಸಿದ್ದೇನೆ. ಅಲ್ಲದೇ, ಹೊಸ ಮುಖಗಳಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಈ ಬಾರಿ ನನಗೂ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.








