ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯುತ್ತಿವೆ. ಸರ್ಕಾರಿ ಉಚಿತ ಬಸ್ ಸೇವೆ ನೀಡಿದ್ದರೂ ಹಲವೆಡೆ ಬಸ್ ಸೌಕರ್ಯಗಳೇ ಇಲ್ಲ. ಅದರಲ್ಲೂ ಕರಾವಳಿ ಪ್ರದೇಶ ಹಾಗೂ ತೀರಾ ಹಿಂದುಳಿದ ಹಳ್ಳಿಗಳ ವಿದ್ಯಾರ್ಥಿಗಳ ಗೋಳಂತೂ ಹೇಳತೀರದಾಗಿರುತ್ತದೆ. ಈ ನಿಟ್ಟಿನಲ್ಲಿ ಇಲ್ಲೊಂದು ಆಟೋ ಚಾಲಕರ ಸಂಘ ವಿದ್ಯಾರ್ಥಿಗಳ ಸೇವೆಗೆ ಮುಂದಾಗಿದೆ.
ಶಿರಸಿಯ ಆಟೋ ಚಾಲಕ ಸಂಘ ಉಚಿತ ಸೇವೆ ನೀಡಿದೆ. ತಮ್ಮೂರ ಮಕ್ಕಳ ಕಲಿತು ಉನ್ನತ ಉದ್ಯೋಗ ಪಡೆಯುವಂತವರಾಗಬೇಕು ಅನ್ನೋದು ಈ ಆಟೋ ಚಾಲಕರ ಕನಸು. ಅದಕ್ಕಾಗಿಯೇ ಈ ಉಚಿತ ಸೇವೆ.
ಸುಮಾರು 92 ಜನ ಹಳ್ಳಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸರ್ಕಾರಿ ಶಾಲೆಯ ಮಕ್ಕಳನ್ನು ಪರೀಕ್ಷಾ ಕೇಂದ್ರದವರೆಗೂ ಡ್ರಾಪ್ ನೀಡಲಾಗುತ್ತಿದೆ. ಅಲ್ಲದೇ, ಪರೀಕ್ಷೆ ಮುಗಿದ ನಂತರ ಮನೆಗೂ ಕರೆದೊಯ್ದು ಬಿಡುತ್ತಾರೆ. ಹೀಗಾಗಿ ವಿದ್ಯಾರ್ಥಿಗಳಿಗೂ ಮುಂದಿನ ಎಕ್ಸಾಂ ತಯಾರಿಗೆ ಸುಲಭವಾಗುತ್ತಿದೆ.
ಈ ಉಚಿತ ಸೇವೆಯಲ್ಲಿ ಸುಮಾರು 15 ಆಟೋ ಹಾಗೂ ಉಳಿದಂತೆ ಟ್ಯಾಕ್ಸಿಗಳು ವಿದ್ಯಾರ್ಥಿಗಳ ಸೇವೆ ಮಾಡುತ್ತಿವೆ. ಆಟೋ ಚಾಲಕರ ಈ ಸಹಾಯ ಗಮನಿಸಿ ಹಲವರು ಕೂಡ ಸಹಾಯ ಮಾಡುತ್ತಿದ್ದಾರೆ.








