ಹಾಸನ : ಇತ್ತೀಚೆಗಷ್ಟೇ ಜೆಡಿಎಸ್ ತೊರೆದಿದ್ದ ಅರಸೀಕೆರೆ ಮಾಜಿ ಶಾಸಕ ಕೆ.ಎಂ. ಶಿವಲಿಂಗೇಗೌಡ (Shivalinge Gowda) ಅವರು ಅಧಿಕೃತವಾಗಿ ಕಾಂಗ್ರೆಸ್ (Congress) ಸೇರಿದ್ದಾರೆ.
ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K.Shivakumar) ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಮೂರು ಬಾರಿ ಜೆಡಿಎಸ್ ಪಕ್ಷದಿಂದ ಶಾಸಕರಾಗಿದ್ದ ಶಿವಲಿಂಗೇಗೌಡ ಅವರು ಇತ್ತೀಚೆಗಷ್ಟೇ ಆ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೇ, ಶಾಸಕ ಸ್ಥಾನಕ್ಕೆ ಕೂಡ ರಾಜಾನಮೆ ಸಲ್ಲಿಸಿದ್ದರು. ಅರಸೀಕೆರೆ ಪಟ್ಟಣದ ಜೇನುಕಲ್ಲು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದು ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಿವಲಿಂಗೇಗೌಡ, ನನ್ನ ಹಣೆಬರಹದಲ್ಲಿ ಕೂಡ ಸಿದ್ದರಾಮಯ್ಯ ಅವರಂತೆ ಜೆಡಿಎಸ್ ತೊರೆದು, ಕಾಂಗ್ರೆಸ್ ಸೇರುವುದು ಇರಬಹುದು. ಹೀಗಾಗಿ ಇವತ್ತು ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇನೆ. ಬಹಳ ಸಂತೋಷದಿಂದ ಇವತ್ತು ಕಾಂಗ್ರೆಸ್ ಸೇರಿದ್ದೇನೆ ಎಂದು ಹೇಳಿದರು.
ಅರಸೀಕೆರೆ ಕ್ಷೇತ್ರಕ್ಕೆ ಬಿಜೆಪಿಯಿಂದ ನಿಲ್ಲಲು ಬಂದಿರುವ ಪುಣ್ಯಾತ್ಮ ಎಲ್ಲರ ಮನೆಗೂ ಒಂದು ಪೇಪರ್ ಪ್ರಿಂಟ್ ಹಾಕಿ ಕಳ್ಸಿದ್ದಾನೆ. ಎಲ್ಲ ಬಿಜೆಪಿ ಸರ್ಕಾರದಿಂದ ಆಗಿರುವುದು ಅಂತ. ಅದು ಸುಳ್ಳು, ಬಿಜೆಪಿ ಸರ್ಕಾರದಲ್ಲಿ ಅರಸೀಕೆರೆ ಅಭಿವೃದ್ಧಿ ಆಗಿಲ್ಲ. 538 ಹಳ್ಳಿಗಳಿಗೆ ಕುಡಿಯುವ ನೀರು, ಎತ್ತಿನಹೊಳೆ ಯೋಜನೆ ನೀಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಬಿಜೆಪಿಯಿಂದ ಕೆಲವೊಂದು ಆಗಿರಬಹುದು, ಆಗಿಲ್ಲ ಅಂತ ಹೇಳಿಲ್ಲ. ಕಾಂಕ್ರಿಟ್ ರಸ್ತೆಗಾಗಿ ಯಡಿಯೂರಪ್ಪ, ಡಿ.ಕೆ.ಶಿವಕುಮಾರ್ ಹಣ ಕೊಟ್ಟಿದ್ದಾರೆ ಎಂದು ಹೇಳಿದರು.








