ಬೆಂಗಳೂರು : ಮೊಗ್ಗಿನ ಮನಸ್ಸಿನ ಚೆಲುವೆ ಶುಭಾ ಪೂಂಜಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇದೀಗ ತಾವು ಮದುವೆಯಾಗುವ ಹುಡುಗನನ್ನು ಪರಿಚಯಿಸಿ, ಮದುವೆ ಯಾವಾಗ ಎಂಬೋದನ್ನು ರಿವೀಲ್ ಮಾಡಿದ್ದಾರೆ.
ನಟಿ ಶುಭಾ ಪೂಂಜಾ ತನ್ನ ಫೇಸ್ ಬುಕ್ ಪೇಜಿನಲ್ಲಿ, ಸುಮಂತ್ ಬಿಲ್ಲವ ಅವರ ಫೋಟೋ ಹಂಚಿಕೊಂಡು, ‘ನಾನು ಮದುವೆ ಆಗುವ ಹುಡುಗ, ನಿಮ್ಮ ಪ್ರೀತಿ ಸದಾ ನಮ್ಮ ಮೇಲೆ ಇರಲಿ’ ಎಂದು ಬರೆದುಕೊಂಡಿದ್ದಾರೆ.
ಹಾಗೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಸುಮಂತ್ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿರುವ ಶುಭಾ ಪೂಂಜಾ, ‘ನಾನು ಮದುವೆಯಾಗುತ್ತಿರುವ ಹುಡುಗ ಸುಮಂತ್ ಬಿಲ್ಲವ ಜೊತೆಗಿನ ಫೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು ಒಂದು ದಿನ ತಡವಾಗಿ ಈ ವಿಚಾರವನ್ನು ನಿಮ್ಮ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದೇನೆ ಎಂದು ನನಗೆ ತಿಳಿದಿದೆ. ಬಹುಶಃ ನಾವು ಲಾಕ್ ಡೌನ್ ಮುಗಿದ ನಂತರ ಡಿಸೆಂಬರ್ ನಲ್ಲಿ ಮದುವೆಯಾಗುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಇನ್ನು ನಟಿ ಶುಭಾ ಪೂಂಜಾ ಕೈ ಹಿಡಿಯುತ್ತಿರುವ ಸುಮಂತ್ ಬಿಲ್ಲವ ಮಂಗಳೂರು ಮೂಲದವರಾಗಿದ್ದು, ಜಯಕರ್ನಾಟಕ ಬೆಂಗಳೂರು ದಕ್ಷಿಣ ಭಾಗದ ಅಧ್ಯಕ್ಷರಾಗಿದ್ದಾರೆ. ಅಲ್ಲದೇ ಸುಮಂತ್ ಬಿಸಿನೆಸ್ ಮ್ಯಾನ್ ಕೂಡ ಆಗಿದ್ದಾರೆ.








