ಅಮೆರಿಕದ ಡೆಲವೇರ್ ನಲ್ಲಿ ಬೃಹತ್ ಹನುಮಂತನ ಪ್ರತಿಮೆಯ ಪ್ರತಿಷ್ಠಾಪನೆ
ಡೆಲವೇರ್, ಜೂನ್ 17: ಅಮೆರಿಕದ ಡೆಲವೇರ್ ನ ಹಾಕೆಸ್ಸಿನ್ ನಲ್ಲಿ 25 ಅಡಿ ಎತ್ತರದ ಬೃಹತ್ ಹನುಮಂತನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಪ್ರತಿಮೆಯನ್ನು ತೆಲಂಗಾಣದ ವಾರಂಗಲ್ ನಿಂದ ಡೆಲವೇರ್ ಗೆ ತರಲಾಗಿದ್ದು, ಇದು ಸುಮಾರು 45 ಟನ್ ತೂಕವಿದೆ ಎಂದು ಈ ಪ್ರಾಂತ್ಯದ ಹಿಂದೂ ದೇವಾಲಯ ಅಸೋಸಿಯೇಶನ್‌ನ ಅಧ್ಯಕ್ಷ ಪತಿಬಂದ ಶರ್ಮಾ ಹೇಳಿದ್ದಾರೆ.

ಡೆಲವೇರ್ ನ ಹಾಕೆಸ್ಸಿನ್ ನಲ್ಲಿ ಪ್ರತಿಷ್ಠಾಪಿಸಲಾಗಿರುವ 25 ಅಡಿ ಎತ್ತರದ ಬೃಹತ್ ಹನುಮಂತನ ಪ್ರತಿಮೆಯನ್ನು ಕಪ್ಪು ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲಾಗಿದ್ದು, ಮೂರ್ತಿಯ ಕೆಲಸವು ಸಂಪೂರ್ಣವಾಗಲು ಸುಮಾರು ಒಂದು ವರ್ಷ ಸಮಯ ತೆಗೆದು ಕೊಂಡಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಕುಶಲಕರ್ಮಿಯೊಬ್ಬರು ನಿಗದಿಪಡಿಸಿದ ಪ್ರಕ್ರಿಯೆಯ ಪ್ರಕಾರವೇ ಪ್ರತಿಮೆಯ ನಿರ್ಮಾಣ ಕಾರ್ಯ ನಡೆದಿದ್ದು, ಹನುಮಂತನ ಪ್ರತಿಮೆ ದೇವಾಲಯಕ್ಕೆ ತಲುಪಿಸಿದ ನಂತರ ದೇವಾಲಯದ ಅರ್ಚಕರು ನಿಗದಿತ ಪೂಜಾ ಕೈಂಕರ್ಯ ನಡೆಸಿದ್ದು ಬಳಿಕ ಪ್ರತಿಮೆ ಪ್ರತಿಷ್ಠಾಪನೆ ನೆರವೇರಿದೆ. ಯಂತ್ರ ಪ್ರತಿಷ್ಠೆ ಮತ್ತು ಪ್ರಾಣ ಪ್ರತಿಷ್ಠೆ ಮೂಲಕ ಹನುಮಾನ್ ಪ್ರತಿಮೆಯ ಪ್ರತಿಷ್ಠೆ ನೆರವೇರಿಸಲಾಗಿದೆ.
ಹನುಮಾನ್ ಪ್ರತಿಮೆ ಅಮೆರಿಕಾದಲ್ಲಿರುವ ಹಿಂದೂ ದೇವರ ಅತ್ಯಂತ ಎತ್ತರದ ಪ್ರತಿಮೆಯಾಗಿದ್ದು, ಕ್ವೀನ್ ಆಫ್ ಪೀಸ್ ಪ್ರತಿಮೆಯ ಬಳಿಕ ಈ ಪ್ರದೇಶದ ಎರಡನೇ ಅತ್ಯಂತ ಎತ್ತರದ ಪ್ರತಿಮೆ ಎಂಬ ಹಿರಿಮೆಗೆ ಪಾತ್ರವಾಗಿದೆ.

ಆದರೆ ಅಮೆರಿಕದಲ್ಲಿ ಕೊರೊನಾ ಸೋಂಕಿನ ಹಾವಳಿ ವಿಪರೀತವಾಗಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.








