ಚಾಮರಾಜನಗರ : ಹೃದಯಾಘಾತದಿಂದ ನಿಧನಹೊಂದಿದ್ದಾರೆ ಎಂದು ವೈದ್ಯರು ಘೋಷಿಸಿದ್ದ ನೌಕರ ಜೀವಂತವಾಗಿರುವುದು ತಿಳಿದು ಬಂದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದೆ.
ಹನೂರಿನಲ್ಲಿ (Hanur) ಚುನಾವಣಾ ತರಬೇತಿ ಸಂದರ್ಭದಲ್ಲಿ ಎದೆನೋವಿನಿಂದ ಕುಸಿದುಬಿದ್ದಿದ್ದ ನೌಕರ ಸಾವನ್ನಪ್ಪಿದ್ದಾರೆಂದು ವೈದ್ಯರು ತಿಳಿಸಿದ್ದರು. ಅದರಂತೆ ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಕೊಂಡೊಯ್ಯುವಾಗ ನೌಕರ ಜೀವಂತವಾಗಿರುವುದು ತಿಳಿದು ಬಂದಿದೆ. ಕೂಡಲೇ ನೌಕರನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ (Mysuru) ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಾಲೂಕು ಖಜಾನೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರ ಜಗದೀಶ್ (40) ಎಂಬವರು ಹನೂರಿನ ವಿವೇಕಾನಂದ ಶಾಲೆಯಲ್ಲಿ ಏರ್ಪಡಿಸಿದ್ದ ಚುನಾವಣಾ ತರಬೇತಿಯಲ್ಲಿ ಭಾಗವಹಿಸಿದ್ದರು. ತರಬೇತಿ ಆರಂಭವಾಗುತ್ತಿದ್ದಂತೆ ಎದೆನೋವಿನಿಂದ ಕುಸಿದು ಬಿದ್ದ ಜಗದೀಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಈ ಸಂದರ್ಭದಲ್ಲಿ ತಪಾಸಣೆ ನಡೆಸಿದ್ದ ವೈದ್ಯರು ದಾರಿ ಮಧ್ಯೆಯೇ ಹೃದಯಾಘಾತವಾಗಿ ಜಗದೀಶ್ ಸಾವನ್ನಪ್ಪಿದ್ದಾಗಿ ಘೋಷಣೆ ಮಾಡಿದ್ದರು. ಅದರಂತೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಪರಿಶೀಲನೆ ನಡೆಸಿದ್ದರು.
ಜೊತೆಗಿದ್ದವರು ಜಗದೀಶ್ ಕೈಕಾಲು ಅಲುಗಾಡಿಸುತ್ತಿರುವುದನ್ನು ಗಮನಿಸಿ ಕೂಡಲೇ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ವೈದ್ಯರು ಜಗದೀಶ್ ಅವರ ನಾಡಿಮಿಡಿತ ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಜೀವಂತವಾಗಿರುವುದು ತಿಳಿದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ಕಳುಹಿಸಿದ್ದಾರೆ.








