ಮುಂಬೈ ಇಂಡಿಯನ್ಸ್(MI) ತಂಡದ ಕ್ಯಾಪ್ಟನ್ ರೋಹಿತ್ ಶರ್ಮ ಐಪಿಎಲ್ ಇತಿಹಾಸದಲ್ಲಿ 6000 ರನ್‌ಗಳನ್ನ ಪೂರೈಸಿದ್ದು, ಆ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ಬ್ಯಾಟರ್ ಎನಿಸಿದ್ದಾರೆ.
ಹೈದ್ರಾಬಾದ್‌ನ ರಾಜೀವ್ ಗಾಂಧಿ ಇಂಟರ್ ನ್ಯಾಷಿನಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಸನ್‌ರೈಸರ್ಸ್(SRH) ವಿರುದ್ಧ ಪಂದ್ಯದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮ, ಈ ಮೈಲುಗಲ್ಲು ದಾಟಿದ್ದಾರೆ. 6000 ರನ್ ಪೂರೈಸುವ ಮೂಲಕ ಮುಂಬೈ ನಾಯಕ ಎಲೈಟ್ ಲಿಸ್ಟ್ ಸೇರಿದ್ದಾರೆ. ಐಪಿಎಲ್‌ನಲ್ಲಿ ಈವರೆಗೂ ವಿರಾಟ್ ಕೊಹ್ಲಿ(ಆರ್‌ಸಿಬಿ), ಡೇವಿಡ್ ವಾರ್ನರ್(ಡಿಸಿ) ಹಾಗೂ ಶಿಖರ್ ಧವನ್(ಪಿಬಿಕೆಎಸ್) ಅವರು ಐಪಿಎಲ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಬ್ಯಾಟರ್‌ಗಳಾಗಿದ್ದಾರೆ.
ಪಂದ್ಯದ ಆರಂಭಕ್ಕೂ ಮುನ್ನ ಆರು ಸಾವಿರ ರನ್‌ಗಳನ್ನ ಪೂರೈಸಲು 14 ರನ್‌ಗಳ ಅಗತ್ಯವಿತ್ತು. ಹೀಗಾಗಿ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿದ ರೋಹಿತ್ ಶರ್ಮ 28(18) ರನ್‌ಗಳಿಸಿ 6000 ರನ್ ಪೂರೈಸಿದರು. ಆದರೆ 227 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ದಾಟಿದ ರೋಹಿತ್, ನಿಧಾನ ಗತಿಯಲ್ಲಿ ಈ ಸಾಧನೆ ಮಾಡಿದರು.
ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬ್ಯಾಟರ್ ಆಗಿರುವ ರೋಹಿತ್ ಶರ್ಮ, ನಾಯಕನಾಗಿಯೂ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅಲ್ಲದೇ ಮುಂಬೈ ತಂಡವನ್ನ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ಹೆಗ್ಗಳಿಕೆ ಸಹ ರೋಹಿತ್ ಹೆಗಲಿಗಿದೆ.








