ಮೈಸೂರು: ವರುಣಾ (Varuna) ಕ್ಷೇತ್ರದಲ್ಲಿ ನಾನು ನೂರಕ್ಕೆ ನೂರರಷ್ಟು ಗೆಲುವು ಸಾಧಿಸುತ್ತೇನೆ ಎದು ಬಿಜೆಪಿ ಅಭ್ಯರ್ಥಿ ವಿ, ಸೋಮಣ್ಣ ಹೇಳಿದ್ದಾರೆ.
ಜನರ ಪ್ರೀತಿ, ವಿಶ್ವಾಸ, ಮಮಕಾರ ನನ್ನ ಮೇಲಿದೆ. ಚಾಮುಂಡೇಶ್ವರಿಯ ಆಶೀರ್ವಾದ ಹಾಗೂ ಮಹದೇಶ್ವರರ ಸಂದೇಶವಿದೆ ಎಂದು ವರುಣಾ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿ ವಿ.ಸೋಮಣ್ಣ (V.Somanna) ಹೇಳಿದ್ದಾರೆ. ಸೋಮಣ್ಣ ಹೊರಗಿನವರು ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಜನರು ಈ ಬಾರಿ ಆಶೀರ್ವಾದ ಮಾಡುವ ನಂಬಿಕೆ ಜಾಸ್ತಿಯಿದೆ. ಯಾರು ಹೊರಗಿನವರು, ಒಳಗಿನವರು ಎನ್ನುವುದಕ್ಕಿಂತ ಹೆಚ್ಚಾಗಿ ನಮ್ಮ ಕಾಲದಲ್ಲಿ ಏನು ಮಾಡಿದ್ದಾರೆ ಎಂಬುವುದು ಮುಖ್ಯವಾಗುತ್ತದೆ. ಸಿದ್ದರಾಮಯ್ಯ ಕೊಪ್ಪಳ (Koppal) ಹಾಗೂ ಬಾದಾಮಿಯಲ್ಲಿ (Badami) ಸ್ಪರ್ಧೆ ಮಾಡಲಿಲ್ವಾ? ಇದರ ಬಗ್ಗೆ ಅವರು ಮಾತನಾಡುವುದಿಲ್ಲ. ಸಿದ್ದರಾಮಯ್ಯ ವಾಸ್ತವಾಂಶ ಮಾತನಾಡಿದರೆ ಒಳ್ಳೆಯದು ಎಂದು ತಿರುಗೇಟು ನೀಡಿದ್ದಾರೆ.
ಲಿಂಗಾಯತ ಸಿಎಂ ವಿಚಾರ ನಾನು ಚರ್ಚೆ ಮಾಡಲ್ಲ. ಅದರ ಬಗ್ಗೆ ಪಕ್ಷದ ವರಿಷ್ಠರು ಮಾತನಾಡುತ್ತಾರೆ. ಒಂದು ಧರ್ಮವನ್ನು ಮತ್ತೊಂದು ಧರ್ಮಕ್ಕೆ ಹೋಲಿಕೆ ಮಾಡುವುದು ನಮ್ಮ ಕರ್ತವ್ಯ ಅಲ್ಲ. ರಾಜಕಾರಣಿಗಳು ತಮ್ಮ ಇತಿಮಿತಿಯಲ್ಲಿ ಮಾತನಾಡಬೇಕು. ನಿಜಲಿಂಗಪ್ಪನವರು, ವೀರೇಂದ್ರ ಪಾಟೀಲ್, ಜೆ.ಎಚ್.ಪಟೇಲ್, ಎಸ್.ಆರ್ ಬೊಮ್ಮಾಯಿ, ಯಡಿಯೂರಪ್ಪನವರು ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ದೇಶಕ್ಕೆ ಗೊತ್ತಿದೆ ಎಂದು ಲಿಂಗಾಯತ ಸಿಎಂ ಹೇಳಿಕೆ ಕುರಿತು ಹೇಳಿದ್ದಾರೆ.
ಎಲ್ಲಾ ವರ್ಗದ ಜನರು ಸೋಮಣ್ಣನಂತಹ ಕೆಲಸಗಾರರು ಬೇಕು ಎಂದು ಕೇಳುತ್ತಿದ್ದಾರೆ. ಮತದಾರರು ಹತ್ತಾರು ಭಾರಿ ಯೋಚನೆ ಮಾಡಿ ನಿರ್ಧಾರ ಮಾಡುತ್ತಾರೆ. ವಸತಿ ಸಚಿವರಾಗಿ ಸೋಮಣ್ಣ ಏನು ಕೆಲಸ ಮಾಡಿದ್ದಾರೆ ಎಂಬುದು ಸಿದ್ದರಾಮಯ್ಯಗೆ ಗೊತ್ತಿದೆ. ಈ ಕುರಿತು ಸಿದ್ದರಾಮಯ್ಯ ಮೆಚ್ಚುಗೆ ಮಾತುಗಳನ್ನು ಹೇಳಿದ್ದಾರೆ ಎಂದು ಹೇಳಿದ್ದಾರೆ.








