ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ರಾಜ್ಯ ಸರ್ಕಾರದ ನಡುವಿನ ಶೀತಲ ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. 2029ರಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು, ನನ್ನನ್ನು ಕೇಂದ್ರ ಗೃಹ ಸಚಿವರನ್ನಾಗಿ ಮಾಡಿದರೆ ಆರ್‌ಎಸ್‌ಎಸ್‌ಗೆ ಹರಿದುಬರುತ್ತಿರುವ ವಿದೇಶಿ ದೇಣಿಗೆ ಕುರಿತು ಸಮಗ್ರ ತನಿಖೆ ನಡೆಸುತ್ತೇವೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ವಿದೇಶಿ ದೇಣಿಗೆ ಕಾಯ್ದೆ ಮತ್ತು ತನಿಖೆ ಪ್ರಸ್ತುತ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಆದಾಗ್ಯೂ, ಆರ್‌ಎಸ್‌ಎಸ್ ವಿದೇಶಿ ಹಣ ಪಡೆಯುತ್ತಿರುವ ಬಗ್ಗೆ ಯಾರಾದರೂ ನಿರ್ದಿಷ್ಟ ದೂರು ನೀಡಿದರೆ, ರಾಜ್ಯಮಟ್ಟದಲ್ಲೇ ಸಂಘಕ್ಕೆ ಯಾವ ಮಾರ್ಗಗಳಿಂದ ದೇಣಿಗೆ ಬರುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದರು. ಸಾರ್ವಜನಿಕ ಮತ್ತು ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸುವ ನಿಯಮದ ಕುರಿತ ಮಸೂದೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳನ್ನೇ ಪಾಲಿಸಲಾಗುತ್ತಿದೆ. ಕೋರ್ಟ್ ಆದೇಶಗಳನ್ನು ಕಾಯ್ದೆಯಾಗಿ ಜಾರಿಗೆ ತಂದರೆ ಬಿಜೆಪಿಯವರಿಗೆ ಬಂದಿರುವ ಸಮಸ್ಯೆಯಾದರೂ ಏನು ಎಂದು ಸಚಿವರು ನೇರವಾಗಿ ಪ್ರಶ್ನಿಸಿದರು.
ನನಗೆ ಆರ್‌ಎಸ್‌ಎಸ್ ಫೋಬಿಯಾ ಇಲ್ಲ, ಅವರಿಗೆ ನನ್ನ ಫೋಬಿಯಾ ಇದೆ!
ಮೂಲ ಮಸೂದೆಯಲ್ಲಿ ಯಾವುದೇ ಸಂಘಟನೆಯ ನಿಷೇಧದ ಕುರಿತು ಪ್ರಸ್ತಾಪವಿಲ್ಲ. ನನಗೆ ಆರ್‌ಎಸ್‌ಎಸ್ ಫೋಬಿಯಾ ಅಂದರೆ ಹೆದರಿಕೆ ಇಲ್ಲ, ಬದಲಾಗಿ ಆರ್‌ಎಸ್‌ಎಸ್ ನಾಯಕರಿಗೇ ನನ್ನ ಅಂದರೆ ಪ್ರಿಯಾಂಕ್ ಫೋಬಿಯಾ ಕಾಡುತ್ತಿದೆ. ಆರ್‌ಎಸ್‌ಎಸ್ ಎಂಬುದು ಅಧಿಕೃತವಾಗಿ ನೋಂದಣಿಯೇ ಆಗಿಲ್ಲ ಎಂದ ಮೇಲೆ ಅದನ್ನು ನಿಷೇಧಿಸುವ ಪ್ರಶ್ನೆ ಎಲ್ಲಿಂದ ಬರುತ್ತದೆ ಎಂದು ಚಾಟಿ ಬೀಸಿದರು.
ಆರ್‌ಎಸ್‌ಎಸ್ ಕಪ್ಪು ಹಣ ಬಚ್ಚಿಡುವ ಸಂಘಟನೆ: ಸಚಿವ ವಿಜಯಾನಂದ ಕಾಶಪ್ಪನವರ
ಬಾಗಲಕೋಟೆಯಲ್ಲಿ ಮಾತನಾಡಿದ ಸಣ್ಣ ಕೈಗಾರಿಕಾ ಸಚಿವ ವಿಜಯಾನಂದ ಕಾಶಪ್ಪನವರ, ಆರ್‌ಎಸ್‌ಎಸ್‌ನವರು ಕಳ್ಳ ಹಣ ಬಚ್ಚಿಡಲು ತಮ್ಮ ಸಂಘವನ್ನು ನೋಂದಣಿ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ನಡವಳಿಕೆಯನ್ನು ಭಂಡತನ ಎನ್ನುತ್ತಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಕಲಬುರಗಿ ಮತ್ತು ದಾವಣಗೆರೆಯಲ್ಲಿ ಪಾಕಿಸ್ತಾನದೊಂದಿಗೆ ನಂಟಿರುವ ವ್ಯಕ್ತಿಗಳನ್ನು ಬಂಧಿಸಿರುವ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬಂಧಿತರು ಯಾರೂ ಕನ್ನಡಿಗರಲ್ಲ. ಅವರು ಉತ್ತರ ಪ್ರದೇಶ ಮತ್ತು ಉತ್ತರ ಭಾರತ ಮೂಲದವರು. ಕಳೆದ ಒಂದೂವರೆ ತಿಂಗಳಿಂದ ನಮ್ಮ ಗುಪ್ತಚರ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಇಂಟೆಲಿಜೆನ್ಸ್ ಬ್ಯುರೊ (IB) ಜೊತೆ ನಿಕಟ ಸಂಪರ್ಕವಿಟ್ಟುಕೊಂಡು ಕಾರ್ಯಚರಣೆ ನಡೆಸಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ ಎಂದು ಸ್ಪಷ್ಟಪಡಿಸಿದರು.
ರಾಮನಗರದಲ್ಲಿ ಮಾತನಾಡಿದ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ, ಪ್ರತಿಯೊಬ್ಬರೂ ಅಂಬೇಡ್ಕರ್ ಅವರು ನೀಡಿದ ಸಂವಿಧಾನದಡಿಯಲ್ಲೇ ಕೆಲಸ ಮಾಡಬೇಕು. ಆರ್‌ಎಸ್‌ಎಸ್ ಸಂವಿಧಾನಕ್ಕಿಂತ ದೊಡ್ಡದೇನೂ ಅಲ್ಲ. ಎಲ್ಲ ಸಂಘ ಸಂಸ್ಥೆಗಳಂತೆ ಅದೂ ನೋಂದಣಿ ಮಾಡಿಸಿಕೊಳ್ಳಬೇಕು. ನಾಳೆ ಯಾರಾದರೂ ಲೆಕ್ಕಪತ್ರ ಕೇಳಿದರೆ ನೀಡಬೇಕಲ್ಲವೇ ಎಂದು ಪ್ರಶ್ನಿಸಿದರು.
ಇತ್ತ ಹಾಸನದಲ್ಲಿ ಮಾತನಾಡಿದ ಅಬಕಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ಸರ್ಕಾರಿ ಜಾಗಗಳನ್ನು ಬಳಸಿಕೊಳ್ಳಲು ಸರ್ಕಾರದ ಅನುಮತಿ ಅಗತ್ಯ. ಸರ್ಕಾರಿ ಜಾಗ ದುರುಪಯೋಗ ಹಾಗೂ ಅತಿಕ್ರಮಣ ತಡೆಯಲು ಕಾನೂನು ರೂಪಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಆರ್‌ಎಸ್‌ಎಸ್ ಕೂಡ ಕಾನೂನಿನಡಿ ನೋಂದಾಯಿಸಿಕೊಳ್ಳುವುದು ಸೂಕ್ತ ಎಂದಿದ್ದಾರೆ.







