ಬೆಂಗಳೂರು: ದಳಪತಿ ವಿಜಯ ತಮಿಳುನಾಡಿನಲ್ಲಿ ಸ್ವಂತ ಪಕ್ಷ ಕಟ್ಟಿ ಸಿಎಂ ಪೀಠದತ್ತ ಹೆಜ್ಜೆ ಇಟ್ಟಿರುವ ಬೆನ್ನಲ್ಲೇ, ಸ್ಯಾಂಡಲ್‌ವುಡ್‌ನ ಗಂಡುಗಲಿ ರಾಕಿಂಗ್ ಸ್ಟಾರ್ ಯಶ್ ಕೂಡ ಕರ್ನಾಟಕ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆಯೇ ಎಂಬ ಕುತೂಹಲಕಾರಿ ಚರ್ಚೆ ಸೃಷ್ಟಿಯಾಗಿದೆ. ಈ ಬಗ್ಗೆ ದೇಶದ ಜನಪ್ರಿಯ ಟಿವಿ ಶೋ ಆಪ್ ಕಿ ಅದಾಲತ್‌ನಲ್ಲಿ ಭಾಗವಹಿಸಿದ್ದ ನಟ ಯಶ್ ಸ್ವತಃ ಪ್ರತಿಕ್ರಿಯಿಸಿದ್ದು, ತಮ್ಮ ರಾಜಕೀಯ ಪ್ರವೇಶ ಹಾಗೂ ಭವಿಷ್ಯದ ಹೆಜ್ಜೆಗಳ ಕುರಿತು ಅತ್ಯಂತ ಪ್ರಬುದ್ಧ ಹಾಗೂ ಸ್ಪಷ್ಟ ಸುಳಿವು ನೀಡಿದ್ದಾರೆ.
ಆಪ್ ಕಿ ಅದಾಲತ್ ಶೋನಲ್ಲಿ ಅಭಿಮಾನಿಯ ನೇರ ಪ್ರಶ್ನೆ
ಖ್ಯಾತ ಪತ್ರಕರ್ತ ರಜತ್ ಶರ್ಮಾ ಅವರ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಯಶ್ ಅವರಿಗೆ ಪ್ರೇಕ್ಷಕರ ಸಾಲಿನಲ್ಲಿದ್ದ ಅಭಿಮಾನಿಯೊಬ್ಬರು ನೇರ ಪ್ರಶ್ನೆ ಕೇಳಿದರು. ತಮಿಳುನಾಡಿನಲ್ಲಿ ದಳಪತಿ ವಿಜಯ್ ನಟನೆಯ ಜೊತೆಗೆ ಸಕ್ರಿಯ ರಾಜಕೀಯಕ್ಕೆ ಧುಮುಕಿ ಸಿಎಂ ಅಭ್ಯರ್ಥಿಯಾಗಿದ್ದಾರೆ. ನಿಮಗೂ ಭಾರತಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಹಾಗಿರುವಾಗ ನೀವು ಕರ್ನಾಟಕದ ಸಿಎಂ ಆಗುವ ಆಸೆ ಇಟ್ಟುಕೊಂಡಿದ್ದೀರಾ? ರಾಜಕೀಯಕ್ಕೆ ಬರುತ್ತೀರಾ ಎಂದು ಪ್ರಶ್ನಿಸಿದರು.
ಅವಶ್ಯಕತೆ ಬಂದರೆ ರಾಜಕೀಯಕ್ಕೆ ಬಂದೇ ಬರ್ತೇನೆ
ಈ ಕುತೂಹಲಕಾರಿ ಪ್ರಶ್ನೆಗೆ ಅತ್ಯಂತ ಎಚ್ಚರಿಕೆಯಿಂದ ಉತ್ತರಿಸಿದ ಯಶ್, ನನಗೆ ರಾಜಕೀಯದ ಬಗ್ಗೆ ಯಾವುದೇ ರೀತಿಯ ಪೂರ್ವಾಗ್ರಹಗಳಿಲ್ಲ. ರಾಜಕೀಯ ಎಂದರೆ ಜನರ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಜನಪರ ಕೆಲಸಗಳನ್ನು ಮಾಡುವುದು ಎಂದು ನಾನು ನಂಬಿದ್ದೇನೆ. ಪ್ರಸ್ತುತ ನಾನು ನಟನಾಗಿ ಸಾಧಿಸಬೇಕಾದದ್ದು ಬಹಳಷ್ಟಿದೆ. ನಮ್ಮ ಕನ್ನಡ ಚಿತ್ರರಂಗ ಹಾಗೂ ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಗುರಿ ನನ್ನದಾಗಿದೆ. ಆದರೆ, ಭವಿಷ್ಯದಲ್ಲಿ ಅಗತ್ಯ ಬಂದಲ್ಲಿ, ಜನರಿಗಾಗಿ ನಾನು ರಾಜಕೀಯ ಪ್ರವೇಶಿಸಬೇಕಾದ ಸಂದರ್ಭ ಎದುರಾದರೆ ಖಂಡಿತವಾಗಿಯೂ ರಾಜಕೀಯಕ್ಕೆ ಬರಬಹುದು ಎಂದು ಯಶ್ ಸ್ಫೋಟಕ ಸುಳಿವು ನೀಡಿದರು.
ಮುಂದುವರಿದು ಮಾತನಾಡಿದ ಅವರು, ಸದ್ಯಕ್ಕೆ ನಟನಾಗಿ ನನ್ನ ಜವಾಬ್ದಾರಿಗಳು ಹೆಚ್ಚಿವೆ. ಸದ್ಯದ ಮಟ್ಟಿಗೆ ನಾನು ರಾಜಕೀಯಕ್ಕೆ ಬರುವ ಯಾವುದೇ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ನಟನಾಗಿ ನಾನು ಮಾಡುತ್ತಿರುವ ಕೆಲಸವೇ ದೇಶದ ಮತ್ತು ಜನರ ಸೇವೆ ಮಾಡಲು ನನಗೆ ದೊಡ್ಡ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಸಿನಿಮಾಗಳ ಮೂಲಕ ಜನರನ್ನು ತಲುಪುವುದು ಮತ್ತು ಅವರ ಮುಖದಲ್ಲಿ ಮಂದಹಾಸ ಮೂಡಿಸುವುದು ಕೂಡ ಒಂದು ರೀತಿಯ ಸೇವೆಯೇ ಆಗಿದೆ ಎಂದರು.
ಇದೇ ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಜೀವನ ಹಾಗೂ ಸಾಮಾಜಿಕ ಜಾಲತಾಣದ ಬಳಕೆಯ ಬಗ್ಗೆಯೂ ರಾಕಿ ಭಾಯ್ ಮಾತನಾಡಿದರು. ಇನ್‌ಸ್ಟಾಗ್ರಾಮ್ ಹಾಗೂ ಎಕ್ಸ್‌ನಲ್ಲಿ ಕೋಟ್ಯಂತರ ಅಭಿಮಾನಿಗಳು ಯಶ್ ಅವರನ್ನು ಫಾಲೋ ಮಾಡುತ್ತಾರೆ. ಆದರೆ, ಯಶ್ ಜಾಲತಾಣಗಳಲ್ಲಿ ಫಾಲೋ ಮಾಡುವುದು ಕೇವಲ ಒಬ್ಬೇ ಒಬ್ಬರನ್ನು ಎಂಬ ಸತ್ಯವನ್ನು ಬಿಚ್ಚಿಟ್ಟರು. ಆ ವಿಶೇಷ ವ್ಯಕ್ತಿ ಬೇರಾರೂ ಅಲ್ಲ, ತಮ್ಮ ಪ್ರೀತಿಯ ಪತ್ನಿ ನಟಿ ರಾಧಿಕಾ ಪಂಡಿತ್! ಪತ್ನಿಯನ್ನು ಮಾತ್ರ ಫಾಲೋ ಮಾಡುವ ಮೂಲಕ ಯಶ್ ತಮ್ಮ ಕೌಟುಂಬಿಕ ಪ್ರೀತಿಯನ್ನು ಮೆರೆದಿದ್ದು, ಈ ಮಾತು ನೆರೆದಿದ್ದ ಪ್ರೇಕ್ಷಕರ ಮನ ಗೆದ್ದಿತು.







