ಸ್ಯಾಂಡಲ್‌ವುಡ್‌ನಿಂದ ಭಾರತೀಯ ಚಿತ್ರರಂಗದ ಉನ್ನತ ಮಟ್ಟಕ್ಕೆ ಬೆಳೆದು ನಿಂತಿರುವ ರಾಕಿಂಗ್ ಸ್ಟಾರ್ ಯಶ್, ಇಂಡಿಯಾ ಟಿವಿಯ ಜನಪ್ರಿಯ ಕಾರ್ಯಕ್ರಮ ಆಪ್ ಕಿ ಅದಾಲತ್‌ನಲ್ಲಿ ಭಾಗವಹಿಸಿ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಖ್ಯಾತ ಪತ್ರಕರ್ತ ರಜತ್ ಶರ್ಮಾ ನಡೆಸಿಕೊಡುವ ಈ ಶೋನಲ್ಲಿ, ಯಶ್ ತಮ್ಮ ಮುಂಬರುವ ಸಿನಿಮಾ ಟಾಕ್ಸಿಕ್ ಹಾಗೂ ವೃತ್ತಿಜೀವನದ ಪಯಣದ ಜೊತೆಗೆ, ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ತಮ್ಮ ವಿರುದ್ಧ ನೀಡಿದ್ದ ಮಿಸ್ಟರ್ ಶೋ ಆಫ್ ಹೇಳಿಕೆಯ ಕುರಿತಾಗಿಯೂ ಮುಕ್ತವಾಗಿ ಮಾತನಾಡಿದ್ದಾರೆ.
ರಶ್ಮಿಕಾ ಹೇಳಿಕೆಗೆ ಯಶ್ ನೀಡಿದ ಪ್ರತಿಕ್ರಿಯೆ ಏನು?
ಕಾರ್ಯಕ್ರಮದಲ್ಲಿ ರಜತ್ ಶರ್ಮಾ ಅವರು, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಿಂದೆ ನಿಮ್ಮನ್ನು ಮಿಸ್ಟರ್ ಶೋ ಆಫ್ ಎಂದು ಕರೆದಿದ್ದರು, ಈ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಅತ್ಯಂತ ತಾಳ್ಮೆ ಮತ್ತು ಪ್ರಬುದ್ಧತೆಯಿಂದ ಉತ್ತರಿಸಿದ ಯಶ್, ಆ ಸಮಯದಲ್ಲಿ ರಶ್ಮಿಕಾ ಚಿತ್ರರಂಗಕ್ಕೆ ಹೊಸಬರಾಗಿದ್ದರು. ಕೆಲವೊಂದು ಬಕ್ವಾಸ್ ಅಂದರೆ ಅರ್ಥವಿಲ್ಲದ ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಕರು 3-4 ಆಯ್ಕೆಗಳನ್ನು ನೀಡಿ ನಟ-ನಟಿಯರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ಆ ಸಂದರ್ಭದಲ್ಲಿ ಆ ಹುಡುಗಿ ಆ ಆಯ್ಕೆ ಸೂಕ್ತವೆಂದು ಭಾವಿಸಿ ನನ್ನ ಹೆಸರು ಹೇಳಿರಬಹುದು ಎಂದರು.
ಯಾರೋ ಒಬ್ಬರ ಅಭಿಪ್ರಾಯದಿಂದ ನನ್ನ ವ್ಯಕ್ತಿತ್ವ ಬದಲಾಗಲ್ಲ
ಮುಂದುವರಿದು ಮಾತನಾಡಿದ ಯಶ್, ಒಬ್ಬ ವ್ಯಕ್ತಿಯಾಗಿ ನಾನು ಪ್ರತಿಯೊಬ್ಬರ ಅಭಿಪ್ರಾಯವನ್ನು ಗೌರವಿಸುತ್ತೇನೆ. ಆದರೆ ಯಾರೋ ಒಬ್ಬರು ನನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎಂಬ ಆಧಾರದ ಮೇಲೆ ನನ್ನ ವ್ಯಕ್ತಿತ್ವ ಎಂದಿಗೂ ಬದಲಾಗುವುದಿಲ್ಲ. ಯಾರ ದೃಷ್ಟಿಕೋನವೂ ನನ್ನ ನಿಜವಾದ ವ್ಯಕ್ತಿತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ. ನಾನು ನಾನಾಗಿಯೇ ಇರುತ್ತೇನೆ ಎಂದು ಯಶ್ ಅತ್ಯಂತ ಮುಕ್ತವಾಗಿ ಉತ್ತರಿಸಿದರು.
ವಿವಾದದ ಹಿನ್ನೆಲೆ ಏನು?
2016ರಲ್ಲಿ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ, 2017ರ ಸಂದರ್ಶನವೊಂದರಲ್ಲಿ ಕನ್ನಡ ಚಿತ್ರರಂಗದ ಮಿಸ್ಟರ್ ಶೋ ಆಫ್ ಯಾರು ಎಂಬ ಪ್ರಶ್ನೆಗೆ ಯಶ್ ಹೆಸರು ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಯಶ್ ಅಭಿಮಾನಿಗಳು ರಶ್ಮಿಕಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಟ್ರೋಲ್ ಮಾಡಿದ್ದರು. ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಂಡಾಗ ರಶ್ಮಿಕಾ ಸುದೀರ್ಘ ಪೋಸ್ಟ್ ಮುಖಾಂತರ ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದರು.
ಇಬ್ಬರೂ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್‌ಗಳು
ಕನ್ನಡದಿಂದ ಪಾದಾರ್ಪಣೆ ಮಾಡಿದ ರಶ್ಮಿಕಾ ಇಂದು ಟಾಲಿವುಡ್, ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಇತ್ತ ಕೆಜಿಎಫ್ ಸರಣಿಯ ಭಾರಿ ಗೆಲುವಿನ ಬಳಿಕ ಯಶ್ ರಾಷ್ಟ್ರೀಯ ಮಟ್ಟದ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಸದ್ಯ ಯಶ್ ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಎ ಫೇರಿಟೇಲ್ ಫಾರ್ ಗ್ರೋನಪ್ಸ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ನಟಿಸುತ್ತಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾದ ಬಿಡುಗಡೆಗಾಗಿ ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.






