ಬೆಂಗಳೂರು: ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಸ್ಯಾಂಡಲ್ವುಡ್ ನಟ ದರ್ಶನ್ ತೂಗುದೀಪ ಅವರಿಗೆ ಈಗ ಜೈಲಿನಲ್ಲಿ ಹೊಸದೊಂದು ದೊಡ್ಡ ಸಮಸ್ಯೆ ಎದುರಾಗಿದೆ. ಜೈಲಿನಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ರಾತ್ರಿಯಿಡೀ ಕಣ್ಣು ಮುಚ್ಚಲು ಸಾಧ್ಯವಾಗುತ್ತಿಲ್ಲ ಎಂದು ದರ್ಶನ್ ಪರದಾಡುತ್ತಿದ್ದಾರೆ. ಆದರೆ, ಈ ಕುರಿತು ರಾಜ್ಯ ಜೈಲುಗಳ ಮಹಾನಿರ್ದೇಶಕರಾದ ಡಿಜಿಪಿ ಅಲೋಕ್ ಕುಮಾರ್ ಅವರು ನೀಡಿದ ಖಡಕ್ ಪ್ರತಿಕ್ರಿಯೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿಗೆ ದಿಢೀರ್ ಭೇಟಿ ನೀಡಿದ್ದ ಡಿಜಿಪಿ ಅಲೋಕ್ ಕುಮಾರ್ ಅವರು ಕಾರಾಗೃಹದ ವ್ಯವಸ್ಥೆ ಹಾಗೂ ಭದ್ರತೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸುತ್ತಿದ್ದಾಗ, ನಟ ದರ್ಶನ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಜೈಲಿನಲ್ಲಿ ಸೊಳ್ಳೆಗಳ ಕಾಟ ತಡೆಯಲಾರದೆ ಪ್ರತಿದಿನ ನಿದ್ದೆಗೆಡುತ್ತಿದ್ದೇನೆ. ಇದರಿಂದ ಆರೋಗ್ಯದ ಮೇಲೆಯೂ ತೀವ್ರ ಪರಿಣಾಮ ಬೀರುತ್ತಿದೆ. ಸೊಳ್ಳೆಗಳ ಕಾಟದಿಂದ ಮುಕ್ತಿ ನೀಡಲು ಜೈಲು ಆಡಳಿತ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಅಥವಾ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.
ದರ್ಶನ್ ಅವರ ಈ ಮನವಿಗೆ ಸ್ಥಳದಲ್ಲೇ ಖಡಕ್ ಆಗಿ ಪ್ರತಿಕ್ರಿಯಿಸಿದ ಡಿಜಿಪಿ ಅಲೋಕ್ ಕುಮಾರ್, ಜೈಲಿನಲ್ಲಿ ಯಾವುದೇ ಕೈದಿಗೆ ವಿಶೇಷ ಸೌಲಭ್ಯ ನೀಡಲು ಬರುವುದಿಲ್ಲ ಎಂದು ನೇರವಾಗಿ ತಿಳಿಸಿದ್ದಾರೆ. ಜೈಲು ಮ್ಯಾನ್ಯುವಲ್ ಪ್ರಕಾರ ಬಂದಿಗಳಿಗೆ ಯಾವೆಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡಬೇಕೋ ಅವುಗಳನ್ನು ಮಾತ್ರ ಒದಗಿಸಲಾಗುತ್ತದೆ. ಕಾನೂನಿನ ಮುಂದೆ ಎಲ್ಲರೂ ಒಂದೇ, ಮ್ಯಾನ್ಯುವಲ್ ಹೊರತಾಗಿ ಪ್ರತ್ಯೇಕವಾಗಿ ಸೊಳ್ಳೆ ಪರದೆ ಅಥವಾ ಬೇರೆ ಯಾವುದೇ ಹೆಚ್ಚುವರಿ ಸೌಲಭ್ಯ ನೀಡಲು ನಾನೇನು ಮಾಡಲು ಸಾಧ್ಯವಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.
ಜೈಲಿನಲ್ಲಿ ನಿಯಮಾವಳಿಗಳ ಪ್ರಕಾರ ಸಾಮಾನ್ಯ ಬಂದಿಗಳಿಗೆ ಸಿಗುವ ಸೌಲಭ್ಯಗಳ ವ್ಯಾಪ್ತಿಯಲ್ಲಿ ವ್ಯವಸ್ಥಿತ ಸಮಸ್ಯೆಗಳಿದ್ದರೆ ಬಗೆಹರಿಸಲಾಗುವುದು. ಒಟ್ಟಾರೆಯಾಗಿ ಜೈಲು ಆವರಣದಲ್ಲಿ ಫಾಗಿಂಗ್ ಮಾಡಿಸುವುದು ಅಥವಾ ಕ್ರಿಮಿನಾಶಕ ಸಿಂಪಡಿಸುವುದು ಆಡಳಿತಾತ್ಮಕ ಕೆಲಸ. ಆದರೆ ಒಬ್ಬನೇ ಬಂದಿಗಾಗಿ ವಿಶೇಷ ಸೌಕರ್ಯ ಒದಗಿಸಲು ಜೈಲು ನಿಯಮಗಳಲ್ಲಿ ಅವಕಾಶವಿಲ್ಲ. ನಿಯಮ ಮೀರಿ ಯಾವುದೇ ಅಧಿಕಾರಿಗಳು ನಡೆದುಕೊಂಡರೆ ಅವರ ಮೇಲೆಯೇ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅಲೋಕ್ ಕುಮಾರ್ ಎಚ್ಚರಿಸಿದ್ದಾರೆ.
ಇತ್ತೀಚೆಗೆ ಜೈಲಿನಲ್ಲಿ ನಟ ದರ್ಶನ್ ಸಿಗರೇಟ್ ಹಿಡಿದು ರಾಜಾತಿಥ್ಯ ಪಡೆಯುತ್ತಿದ್ದ ಫೋಟೋ ವೈರಲ್ ಆಗಿ ದೊಡ್ಡ ಚರ್ಚೆ ಎದ್ದಿತ್ತು. ಈ ಘಟನೆಯ ಬೆನ್ನಲ್ಲೇ ಜೈಲು ಆಡಳಿತ ಮಂಡಳಿ ಪ್ರತಿಯೊಂದು ಚಟುವಟಿಕೆಯ ಮೇಲೆಯೂ ಹದ್ದಿನ ಕಣ್ಣಿಟ್ಟಿದೆ. ಪ್ರಸ್ತುತ ದರ್ಶನ್ ಸಾಮಾನ್ಯ ಖೈದಿಯಂತೆ ಕಾಲ ಕಳೆಯಬೇಕಾಗಿದ್ದು, ಸೊಳ್ಳೆಗಳ ಕಾಟದ ನಡುವೆಯೇ ರಾತ್ರಿ ಕಳೆಯುವಂತಾಗಿದೆ. ಡಿಜಿಪಿ ಅವರ ಈ ನಿಯಮಬದ್ಧ ಮತ್ತು ಖಡಕ್ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಕಾರಾಗೃಹದಲ್ಲಿ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.







