ನವದೆಹಲಿ: ಸ್ವಾತಂತ್ರ್ಯ ದಿನೋತ್ಸವದಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ಸೋನಿಯಾ ಗಾಂಧಿ ಅಡ್ಡಿಪಡಿಸಿದ್ದಾರೆ ಎಂಬ ಬಿಜೆಪಿ ಆರೋಪದ ಬೆನ್ನಲ್ಲೇ, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ನೀಡಿರುವ ಹೇಳಿಕೆಯೊಂದು ದೇಶಾದ್ಯಂತ ಹೊಸ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ. ವಂದೇ ಮಾತರಂ ಗೀತೆಗೆ ಗೌರವ ಸೂಚಿಸಲು ನಾನು ಎದ್ದು ನಿಲ್ಲುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಆ ಗೀತೆಯನ್ನು ಹಾಡುವುದಿಲ್ಲ ಎಂದು ಶಹರಾನ್‌ಪುರ ಸಂಸದ ಇಮ್ರಾನ್ ಮಸೂದ್ ಸೋಮವಾರ ಮುಕ್ತವಾಗಿ ಹೇಳಿಕೆ ನೀಡಿದ್ದು, ಬೃಹತ್ ವಿವಾದ ಸೃಷ್ಟಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಇಮ್ರಾನ್ ಮಸೂದ್, ನಾನು ಅಲ್ಲಾಹನನ್ನು ಹೊರತುಪಡಿಸಿ ಈ ಜಗತ್ತಿನಲ್ಲಿ ಬೇರಾರನ್ನೂ, ಯಾವುದನ್ನೂ ಪೂಜಿಸಲು ಸಾಧ್ಯವಿಲ್ಲ. ನನ್ನ ಧರ್ಮವನ್ನು ಅನುಸರಿಸುವ ಸಂಪೂರ್ಣ ಸಾಂವಿಧಾನಿಕ ಹಕ್ಕು ನನಗಿದೆ. ಭಾರತದ ಸಂವಿಧಾನವೇ ನನಗೆ ಈ ಸ್ವಾತಂತ್ರ್ಯ ನೀಡಿದೆ. ಯಾರೂ ನನ್ನಿಂದ ಈ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ನಾನು ರಾಷ್ಟ್ರೀಯ ಗೀತೆಯನ್ನು ಎಂದಿಗೂ ಅವಮಾನಿಸುವುದಿಲ್ಲ. ಗೌರವಾರ್ಥವಾಗಿ ಎದ್ದು ನಿಲ್ಲುತ್ತೇನೆ, ಆದರೆ ಗೀತೆಯನ್ನು ಹಾಡಲು ನನ್ನ ಧರ್ಮ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಿಮಗೆ ಇಷ್ಟವಿದ್ದರೆ ವಂದೇ ಮಾತರಂ ಅನ್ನು ಎಷ್ಟು ಬೇಕಾದರೂ ಪ್ರಚಾರ ಮಾಡಿ, ಅದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ನನ್ನ ಮೇಲೆ ಒತ್ತಾಯ ಮಾಡಲು ಬಾರಾರೂ ಬರುವಂತಿಲ್ಲ. ನಾನು ಹಿಂದೆಂದೂ ವಂದೇ ಮಾತರಂ ಹಾಡಿಲ್ಲ ಮತ್ತು ಭವಿಷ್ಯದಲ್ಲೂ ಎಂದಿಗೂ ಹಾಡುವುದಿಲ್ಲ. ನನಗೆ ಎಷ್ಟು ಸಾಧ್ಯವೋ ಅಷ್ಟನ್ನು ಮಾತ್ರ ಮಾಡುತ್ತೇನೆ. ವಂದೇ ಮಾತರಂ ಗೀತೆಯನ್ನು ವಿರೋಧಿಸುವ ಮುನ್ನ ಅದರ ಸಂಪೂರ್ಣ ಇತಿಹಾಸವನ್ನು ಓದಿ ತಿಳಿದುಕೊಳ್ಳಿ. ಅದು ಎಲ್ಲಿಂದ ಬಂತು, ಹೇಗೆ ಮತ್ತು ಯಾವ ಉದ್ದೇಶಕ್ಕಾಗಿ ಬರೆಯಲ್ಪಟ್ಟಿತು ಎಂಬುದನ್ನು ಅಧ್ಯಯನ ಮಾಡಿ ಬಂದಾಗ ನಾನು ನಿಮಗೇ ವಿವರಣೆ ನೀಡುತ್ತೇನೆ ಎಂದು ಮಾಧ್ಯಮದವರಿಗೆ ಸವಾಲು ಎಸೆದಿದ್ದಾರೆ.
ಆಗಸ್ಟ್ 15 ರಂದು ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸ್ವಾತಂತ್ರ್ಯ ದಿನೋತ್ಸವ ಆಚರಿಸುವಾಗ ವಂದೇ ಮಾತರಂ ಗೀತೆ ಗಾಯನ ನಡೆಯುತ್ತಿತ್ತು. ಈ ವೇಳೆ ಸೋನಿಯಾ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ತೆರಳಿ ಗೀತೆಯನ್ನು ನಿಲ್ಲಿಸುವಂತೆ ಸೂಚಿಸಿದರು ಎಂದು ಬಿಜೆಪಿ ನಾಯಕರು ವಿಡಿಯೋ ತುಣುಕೊಂದನ್ನು ಹಂಚಿಕೊಂಡು ತೀವ್ರ ವಾಗ್ದಾಳಿ ನಡೆಸಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.
ಆದರೆ ಬಿಜೆಪಿ ಆರೋಪಗಳನ್ನು ಕಾಂಗ್ರೆಸ್ ನಾಯಕರು ಬಲವಾಗಿ ತಳ್ಳಿಹಾಕಿದ್ದಾರೆ. ವಂದೇ ಮಾತರಂ ಗೀತೆಗೆ ಸೋನಿಯಾ ಗಾಂಧಿ ಯಾವುದೇ ಅಡ್ಡಿಪಡಿಸಿಲ್ಲ. ದೀರ್ಘಕಾಲದಿಂದ ನಿಂತುಕೊಂಡಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆ ಮಾಡುವಂತೆ ಮಾತ್ರ ಸೋನಿಯಾ ಗಾಂಧಿ ಕೇಳಿಕೊಂಡಿದ್ದರು. ಇದನ್ನು ಬಿಜೆಪಿ ತಿರುಚಿ ಅಪಪ್ರಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ. ಈ ನಡುವೆ ಸಂಸದ ಇಮ್ರಾನ್ ಮಸೂದ್ ಅವರ ಈ ಹೇಳಿಕೆ ಬೆಂಕಿಗೆ ತುಪ್ಪ ಸುರಿದಂತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಗ್ದಾಳಿ ಉಗ್ರ ರೂಪ ತಾಳಿದೆ.






