ಪಾಟ್ನಾ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್ ಖಾನ್ ಸೇರಿ ಎಂಟು ಸೆಲೆಬ್ರಿಟಿಗಳ ವಿರುದ್ಧ ದೂರು ದಾಖಲಾಗಿದೆ.
ಸುಶಾಂತ್ ಸಿಂಗ್ ಅವರನ್ನು ಏಳು ಸಿನಿಮಾಗಳಿಂದ ಕೈ ಬಿಡಲಾಗಿತ್ತು. ಜೊತೆಗೆ ಕೆಲ ಸಿನಿಮಾಗಳ ಬಿಡುಗಡೆಗೆ ಅಡ್ಡಿ ಮಾಡಿದ್ದರು. ಈ ಎಲ್ಲ ಘಟನೆಗಳು ಸುಶಾಂತ್ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿವೆ ಎಂದು ಆರೋಪಿಸಿ ವಕೀಲ ಸುಧಿರ್ ಕುಮಾರ್ ಓಜಾ ಮುಜಾಫರ್ಪುರ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಈ ಹಿನ್ನೆಲೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್, ಬಾಲಿವುಡ್ ಸಿನಿಮಾ ನಿರ್ದೇಶಕರಾದ ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ, ನಿರ್ಮಾಪಕಿ ಏಕ್ತಾ ಕಪೂರ್ ಸೇರಿದಂತೆ ಎಂಟು ಜನರ ವಿರುದ್ಧ ಐಪಿಸಿ ಸೆಕ್ಸನ್ 306, 109, 504 ಮತ್ತು 506 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
ಭಾನುವಾರ ಬೆಳಗ್ಗೆ 9.30ಕ್ಕೆ ಜ್ಯೂಸ್ ಕುಡಿದು ತನ್ನ ಕೋಣೆ ಸೇರಿದ್ದ ಸುಶಾಂತ್ ಸಿಂಗ್ ರಜಪೂತ್, ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಕೈ ಪೋ ಚೆ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ಸುಶಾಂತ್ ಗೆ ಧೋನಿ ಸಿನಿಮಾ ದೊಡ್ಡ ಬ್ರೇಕ್ ನೀಡಿತ್ತು.








