ನ್ಯೂಸ್ ಡೆಸ್ಕ್ : ಭಾರತ ಮತ್ತು ಚೀನಾ ದೇಶಗಳ ನಡುವೆ ಯುದ್ದ ನಡೆದು ಇಂದಿಗೆ 58 ವರ್ಷಗಳು ಕಳೆದಿವೆ. ಇದೀಗ ಐದು ದಶಕಗಳ ಬಳಿಕ ಮತ್ತೆ ಭಾರತವನ್ನು ಚೀನಾ ಕೆಣಕುತ್ತಿದೆ. ಇದರ ಪರಿಣಾಮವಾಗಿಯೇ ಸೋಮವಾರ ಲಡಾಖ್ ಪ್ರದೇಶದಲ್ಲಿ ರಕ್ತಪಾತ ಹರಿದಿದೆ.
1962ರ ಅಕ್ಟೋಬರ್ 20ರಂದು ನೆರೆಯ ಚೀನಾ ಭಾರತದೊಳಗಿನ ಎರಡು ಪ್ರದೇಶಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿತು. ಈ ಸಂದರ್ಭದಲ್ಲಿ ಭಾರತ ಯುದ್ಧಕ್ಕೆ ಸಿದ್ಧವಾಗಿರಲಿಲ್ಲ. ಹೀಗಾಗಿ 20,000 ಭಾರತೀಯ ಯೋಧರು 80,000 ಚೀನೀಯರ ಮುಂದೆ ತಿಂಗಳ ಕಾಲ ಹೋರಾಟ ನಡೆಸಿ ಹೈರಾಣಾಗಿ ಹೋದರು. ನವಂಬರ್ 21ರಂದು ಕೊನೆಗೊಂಡ ಯುದ್ದದಲ್ಲಿ ಭಾರತ ಸೋಲನ್ನೊಪ್ಪಿಕೊಂಡಿತ್ತು. ಭಾರತದ ಸೋಲಿಗೆ ಪ್ರಧಾನಿ ಜವಹರಲಾಲ್ ನೆಹರು ಅವರ ವಿವೇಚನಾರಹಿತ ನಿಲುವುಗಳೇ ಕಾರಣ ಎಂಬ ಆರೋಪವು ಕೇಳಿಬಂದಿತ್ತು. ಇದರ ಬಳಿಕ ಯುದ್ದದ ವಿಚಾರ ರಾಜಕೀಯಕ್ಕೆ ಬಳಕೆಯಾಯಿತು.
ಗಡಿ ವಿವಾದ ಯಾವಗ ಪ್ರಾರಂಭವಾಗಿದ್ದು
ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ನಿನ್ನೆ ಮೊನ್ನೆಯದ್ದಲ್ಲ. 1914 ರಲ್ಲಿ ಆರಂಭವಾದ ಗಡಿ ವಿವಾದ ಇಂದಿಗೂ ಬೂದಿ ಮುಚ್ಚಿದ ಕೆಂಡದಂತಿದೆ. 1962ರಲ್ಲಿ ನಡೆದ ಯುದ್ದ ನಂತರ ಮೂರು ಒಪ್ಪಂದಗಳನ್ನು ಮಾಡಿಕೊಂಡರೂ ಎರಡು ದೇಶಗಳ ಗಡಿ ವಿವಾದಗಳಿಗೆ ಇನ್ನೂ ಪೂರ್ಣ ವಿರಾಮ ಇಡಲು ಆಗಿಲ್ಲ. ಇದಕ್ಕೆ ತಾಜ ಉದಾಹರಣೆಯೆಂದರೆ ಲಡಾಖ್ ನ ಗಾಲ್ವನ್ ಪ್ರದೇಶದಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಸಂಘರ್ಷ. ಇದರ ಜೊತೆಗೆ 2017 ಜೂನ್ ತಿಂಗಳಲ್ಲಿ ಚೀನಾ ಸೈನಿಕರು ಭೂತಾನ್ ದೋಕಲಾ ಪ್ರದೇಶವನ್ನು ಅತಿಕ್ರಮಿಸಿ ರಸ್ತೆ ಮತ್ತು ಗಡಿ ಠಾಣೆ ನಿರ್ಮಿಸಲು ಮುಂದಾಗಿದ್ದರು. ಇದಕ್ಕೆ ಭಾರತ ಸೇನೆ ತಕ್ಕ ಉತ್ತರ ನೀಡಿತ್ತು ಹಾಗೇ ಚೀನಾ ಸೇನೆಯನ್ನು ಹಿಮ್ಮೆಟ್ಟಿಸಿತ್ತು.
ಪ್ರಸ್ತುತ ಭಾರತ ಸದೃಡವಾದ ಸೇನಾ ಬಲ ಹೊಂದಿದೆ. ತಂತ್ರಜ್ಞಾನದಲ್ಲೂ ಬೇರೊಂದು ದೇಶಕ್ಕೆ ಸವಾಲು ಹಾಕುವಷ್ಟು ಮುಂದಡಿ ಇಟ್ಟಿದೆ. ಆದರೆ 1962 ರಲ್ಲಿ ಭಾರತ ಸೇನೆ ಯುದ್ದ ಎದುರಿಸುವಷ್ಟು ಬಲವಾಗಿರಲಿಲ್ಲ. ಸೇನೆಯಲ್ಲಿ ತಂತ್ರಜ್ಞಾನ ಬಳಕೆಯ ಕೊರತೆ ಇತ್ತು. ಸೈನಿಕರು ಮೂಲಭೂತ ಸೌಕರ್ಯಗಳು ಇಲ್ಲದ ಪರಿಸ್ಥಿತಿಯಲ್ಲಿದ್ದರು. ಯುದ್ದಕ್ಕೆ ಸಿದ್ದವಿಲ್ಲದ ಸಮಯದಲ್ಲಿ ಚೀನಾ ಭಾರತದ ಮೇಲೆ ಮುಗಿ ಬಿದ್ದಿತ್ತು. ಹಾಗಾಗಿ ಸೋಲು ಕಂಡಿತ್ತು. ಆದರೆ ಪ್ರಸ್ತುತ ಭಾರತ ಬಲಿಷ್ಠ ಸೇನಾ ಬಲ ಹೊಂದಿರುವ ಐದು ರಾಷ್ಟ್ರಗಳಲ್ಲಿ ಒಂದಾಗಿದೆ. 1.4 ಮಿಲಿಯನ್ ಸಕ್ರಿಯ ಸೇನಾ ಸಿಬ್ಬಂದಿಯನ್ನು ಹೊಂದಿದೆ. ಜೊತೆಗೆ ಬೇರೆ ಬೇರೆ ವಿಭಾಗಗಳಲ್ಲಿ ತನ್ನ ಕದಂಬ ಬಾಹುಗಳನ್ನು ಚಾಚಿಕೊಂಡಿದೆ. ಆದ್ದರಿಂದ ಚೀನಾಕ್ಕೆ ತಕ್ಕ ಉತ್ತರ ನೀಡಲು ಸರ್ವಶಕ್ತವಾಗಿದೆ.
1962 ಯುದ್ಧದ ಬಳಿಕ ತನ್ನ ಕೊರತೆಯನ್ನು ಗಮನಿಸಿದ ನೆಹರು ಸರ್ಕಾರ ಸೇನೆಗೆ ಅಗತ್ಯ ಮೂಲಭೂತ ಸೌಕರ್ಯಗಳ ಒದಗಿಸಲು ಮುಂದಾಗಿತ್ತು. ಅದಕ್ಕಾಗಿ ಸರ್ಕಾರ ದೇಶದ ಜನರಿಂದಲೇ ಹಣ ಸಂಗ್ರಹಕ್ಕೆ ಮುಂದಾಗಿತ್ತು. ಈ ಕಾರಣಕ್ಕೆ ರಾಷ್ಟ್ರೀಯ ರಕ್ಷಣಾ ನಿಧಿ ಸಂಗ್ರಹಣ ಪರಿಷತ್ ಸ್ಥಾಪಿಸಲಾಹಯಿತು. ನೂತನ ಪರಿಷತ್ 31 ಸದಸ್ಯರನ್ನೊಳಗೊಂಡಿತ್ತು. ಈ ವಿಚಾರವನ್ನು ಅಂದಿನ ಹಣಕಾಸು ಮಂತ್ರಿ ಮೂರಾರ್ಜಿ ದೇಸಾಯಿ ಘೋಷಣೆ ಮಾಡಿದರು. ಹಾಗೇ ಪ್ರತಿ ರಾಜ್ಯದ ಕಾಂಗ್ರೆಸ್ ನಾಯಕರಿಗೆ ನಿಧಿ ಸಂಗ್ರಹಿಸುವ ಜವಬ್ದಾರಿಯನ್ನ ಮೊರಾರ್ಜಿ ದೇಸಾಯಿ ವಹಿಸಿದ್ದರು.
ಯಾವ ಉದ್ದೇಶಕ್ಕೆ ತಕರಾರು ತೆಗೆದಿದೆ ಚೀನಾ
1954 ರಲ್ಲಿ ಭಾರತ ಮತ್ತು ಚೀನಾ ದೇಶಗಳು ಪಂಚಶೀಲ ತತ್ವಗಳನ್ನು ಒಪ್ಪಿಕೊಂಡಿದ್ದರು. ಆಗ ನಡೆದ ಚರ್ಚೆ ಪ್ರಕಾರ ಚೀನಾದ ಆಡಳಿತವನ್ನು ಭಾರತ ಕ್ಷಮಿಸಿತ್ತು. ಈ ಸಂದರ್ಭದಲ್ಲಿ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಹಿಂದಿ – ಚೀನಿ ಭಾಯಿ-ಭಾಯಿ ಎಂಬ ಮಂತ್ರ ಜಪಿಸಿದ್ದರು. 1954 ಜುಲೈನಲ್ಲಿ ಎರಡು ದೇಶಗಳ ನಕಾಶೆಗಳನ್ನು ನಿರ್ಧಿಷ್ಟಪಡಿಸಿಕೊಳ್ಳಲು ನೆಹರು ಮುಂದಾಗಿದ್ದರು. ಆದರೆ ಚೀನಾ ತೋರಿಸಿದ ಮ್ಯಾಪ್ಗಳಲ್ಲಿ ಭಾರತದ 1,20,000 ಕಿ.ಮೀ ಪ್ರದೇಶವನ್ನು ತನ್ನದು ಎಂದು ಮ್ಯಾಪ್ ನಲ್ಲಿ ತೋರಿಸಿತ್ತು. ಚೀನಾದ ನಡೆಯನ್ನು ಭಾರತದ ಖಂಡಿಸಿತ್ತು. ಜೊತೆಗೆ 1959 ರಲ್ಲಿ ಚೀನಾದಿಂದ ಟಿಬೆಟ್ ನ ಧರ್ಮಗುರು ದಲಾಯಿ ಲಾಮ ತಪ್ಪಿಸಿಕೊಂಡು ಬಂದಿದ್ದರು. ಆಗ ಟಿಬೆಟ್ ನ ಧರ್ಮಗುರು ದಲಾಯಿ ಲಾಮ ಅವರಿಗೆ ಆಶ್ರಯ ನೀಡಿತ್ತು. ಇದೆ ಕೋಪದಲ್ಲಿ 1962 ರಲ್ಲಿ ಭಾರತ ಮೇಲೆ ಚೀನಾ ದಾಳಿ ಮಾಡಿತ್ತು.
ತಾನು ಬಲಿಷ್ಠ ಎಂದು ತೋರಿಸಿಕೊಳ್ಳುವ ಪರಿಪಾಠ ಬೆಳೆಸಿಕೊಂಡ ಚೀನಾ
ಚೀನಾ ವಿರುದ್ದ ಪದೆ ಪದೆ ಕ್ಯಾತೆ ತೆಗೆಯುತ್ತಿರುತ್ತದೆ. ಯಾಕೆಂದರೆ ಭಾರತ ಹಿಂದಿನ ಪರಿಸ್ಥತಿಗೆ ಹೋಲಿಸಿದರೆ ಈಗ ಬಲಿಷ್ಠವಾಗಿದೆ. ಚೀನಾ ತನನ್ನು ಬಿಟ್ಟು ಬೇರೆ ಯಾವ ದೇಶವು ಬಲಿಷ್ಠವಾಗಿರಬಾರದು ಎಂದು ಭಾವಿಸಿದಂತಿದೆ. ಅದಕ್ಕಾಗಿ ಭಾರತದ ಜೊತೆ ಸಂಘರ್ಷ ಜೀವಂತವಾಗಿ ಇಡುತ್ತಾ ಬಂದಿದೆ. ಅಲ್ಲದೆ ಪ್ರತಿ ಭಾರಿಯು ಸಂಘರ್ಷ ಮಾಡಿದಾಗ ಒಂದು ಯೋಜನೆ ಚೀನಾ ಹೊಂದಿದರುತ್ತದೆ. ಇದೀಗ ಭಾರತದ ಜೊತೆ ತಕರಾರು ತೆಗೆದು ಇಡಿ ವಿಶ್ವದ ಗಮನ ತನ್ನತ್ತ ಸೆಳೆಯಲು ಪ್ರಯತ್ನ ಮಾಡುತ್ತಿದೆ. ಯಾಕೆಂದರೆ ಕೊರೊನಾ ಸೋಂಕು ಚೀನಾದಿಂದ ಹರಡಿದೆ ಎಂಬ ಕಾರಣಕ್ಕೆ ಬೇರೆ ದೇಶಗಳು ಚೀನಾ ಮೇಲೆ ಕೋಪ ಮಾಡಿಕೊಂಡಿವೆ. ಇದನ್ನು ಸರಿದೂಗಿಸಲು ಚೀನಾ ತನ್ನ ವರಸೆ ಬದಲಿಸಿದೆ ಎಂದು ಕೆಲ ಚಿಂತಕರು ಹೇಳುತ್ತಿದ್ದಾರೆ. ಅಲ್ಲದೆ ಭಾರತ ಜಾಗತಿಕ ಮಟ್ಟದಲ್ಲಿ ಹೆಚ್ಚೆಚ್ಚು ಗುರುತಿಸಿಕೊಳ್ಳುತ್ತಿದೆ. ಚೀನಾ ಜಾಗತಿಕ ಮಟ್ಟದಲ್ಲಿ ತನ್ನ ಪ್ರಾಬಲ್ಯ ಮತ್ತಷ್ಟು ಹೆಚ್ಚಿಸಲು ಈ ಪ್ರಯತ್ನ ಮಾಡುತ್ತಿದೆ ಎಂದು ಹೇಳಾಗುತ್ತಿದೆ.








