ಬಾಗಲಕೋಟೆ : ದೇಶದಲ್ಲಿ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಎಲ್ಲೆಲ್ಲಿ ಪ್ರಚಾರಕ್ಕೆ ಹೋಗುತ್ತಾರೋ ಅಲ್ಲಿ ಕಾಂಗ್ರೆಸ್(Congress) ಸೋಲು ಕಾಣುತ್ತಿದೆ. ಅದು ವಿನಾಶಕ್ಕೆ ಹೋಗುತ್ತಿದೆ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ (Arun Singh) ಲೇವಡಿ ಮಾಡಿದ್ದಾರೆ.
ಬಾಗಲಕೋಟೆ (Bagalkote) ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಏನೇ ಮಾಡಿದರೂ ಅವರ ಸುಳ್ಳಿನ ಗ್ಯಾರಂಟಿಗಳನ್ನು ಜನ ನಂಬುವುದಿಲ್ಲ. ಕರ್ನಾಟಕದಲ್ಲಿ ಇನ್ನು ಮುಂದೆ ಎಂದಿಗೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಗುಡುಗಿದ್ದಾರೆ.
ಉತ್ತರಪ್ರದೇಶ ಚುನಾವಣೆಯ ನೇತೃತ್ವವನ್ನು ವಹಿಸಿದ್ದ ಪ್ರಿಯಾಂಕಾ ಗಾಂಧಿ ಜನರಿಗೆ ಸುಳ್ಳಿನ ಗ್ಯಾರಂಟಿಗಳನ್ನು ನೀಡಿದ್ದರು. ಉತ್ತರಪ್ರದೇಶದ 403 ಸ್ಥಾನಗಳಲ್ಲಿ ಕೇವಲ 2 ಸ್ಥಾನಗಳನ್ನು ಗೆದ್ದಿತು. ಆಗ ಕಾಂಗ್ರೆಸ್ ಸಾಧನೆ ಎನೆಂದು ತಿಳಿಯುತ್ತದೆ. ಈಗಾಗಲೇ ಕಾಂಗ್ರೆಸ್ ಪಕ್ಷ ಮುಗಿದುಹೋದ ಅಧ್ಯಾಯವಾಗಿದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ ಪಕ್ಷ ಯಾವುದೇ ಘೋಷಣೆ ಮಾಡಿದರೂ ಅದು ಪೂರ್ಣಗೊಳಿಸುವುದಿಲ್ಲ. ನಾವು ಬಡವರ ಕಲ್ಯಾಣ, ಮಧ್ಯಮ ವರ್ಗಕ್ಕಾಗಿ ಅವರ ಉತ್ತೇಜನಕ್ಕಾಗಿ ಭರವಸೆ ನೀಡುತ್ತೇವೆ. ಈಗ ಅರ್ಧ ಲೀ. ನಂದಿನಿ ಹಾಲು, ಉಚಿತ ಗ್ಯಾಸ್ ಸಿಲಿಂಡರ್ ನೀಡುತ್ತೇವೆ. ಆದರೆ ಕಾಂಗ್ರೆಸ್ ಘೋಷಣೆಗಳು ಬಜೆಟ್ಗೆ ವರ್ಕೌಟ್ ಆಗುವುದಿಲ್ಲ. ಈಗಾಗಲೇ ಕಾಂಗ್ರೆಸ್ ಉತ್ತರಾಖಂಡ, ಗೋವಾ, ಅಸ್ಸಾಂ ಉತ್ತರಪ್ರದೇಶದಲ್ಲಿ ಪ್ರತಿ ರಾಜ್ಯದಲ್ಲೂ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.








